ಅಫ್ಘಾನ್​ನಲ್ಲಿ ತಾಲಿಬಾನಿಗಳಿಂದ ಹೊಸ ಕಾನೂನು ಜಾರಿ; ಆತಂಕ ವ್ಯಕ್ತಪಡಿಸಿ ಯುಎನ್ ರಾಯಭಾರಿ ಹೇಳಿದ್ದೇನು?

Untitled-design-2024-08-25T191020.345
Published on

ನ್ಯೂಯಾರ್ಕ್​​​: ಅಫ್ಘಾನಿಸ್ತಾನದಲ್ಲಿನ ತಾಲಿಬಾನ್‌ ಸರ್ಕಾರ ಜಾರಿಗೆ ತಂದಿರುವ ಹೊಸ ಕಟ್ಟುನಿಟ್ಟಿನ ಕಾನೂನಿನ ಬಗ್ಗೆ ಯುನೈಟೆಡ್ ನೇಷನ್ಸ್ ಅಸಿಸ್ಟೆನ್ಸ್ ಮಿಷನ್ (UNAMA) ಭಾನುವಾರ (ಆಗಸ್ಟ್​​ 25) ಕಳವಳ ವ್ಯಕ್ತಪಡಿಸಿದೆ. ಸಾರ್ವಜನಿಕವಾಗಿ ಮಹಿಳೆಯರು ನಿಲುವಂಗಿಯನ್ನು ಧರಿಸಬೇಕು ಮತ್ತು ಅವರ ಕಣ್ಣುಗಳನ್ನು ಹೊರತುಪಡಿಸಿ ಮುಖವನ್ನು ಮುಚ್ಚಬೇಕು ಎಂಬ ಹೊಸ ನೈತಿಕತೆಯ ಕಾನೂನುಗಳು ಅಫ್ಘಾನಿಸ್ತಾನದ ಭವಿಷ್ಯಕ್ಕೆ ಸಂಕಷ್ಟವನ್ನು ಉಂಟುಮಾಡುತ್ತವೆ ಎಂದು ಯುಎನ್ ಉನ್ನತ ಅಧಿಕಾರಿಯೊಬ್ಬರು ಎಚ್ಚರಿಸಿದ್ದಾರೆ.

ಈ ಹೊಸ ಕಾನೂನುಗಳು ಕೆಲವೊಮ್ಮೆ ಅಸ್ಪಷ್ಟವಾದ ಉಲ್ಲಂಘನೆಗಳ ಆಧಾರದ ಮೇಲೆ ಯಾರಿಗಾದರೂ ಬೆದರಿಕೆ ಹಾಕಲು ಮತ್ತು ಯಾರನ್ನಾದರೂ ಬಂಧಿಸಲು ಅಧಿಕಾರ ನೀಡುತ್ತದೆ ಎಂದು UN ರಾಯಭಾರಿ ಹೇಳಿದರು. ಇದು ಈಗಾಗಲೇ ಅಫ್ಘಾನ್ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳ ಮೇಲೆ ನಿರ್ಬಂಧಗಳನ್ನು ವಿಸ್ತರಿಸಿದೆ. ಇದರಲ್ಲಿ ಮನೆಯ ಹೊರಗೆ ಮಹಿಳೆಯರು ಮಾತನಾಡುವುದು ಸಹ ನೈತಿಕ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ ಎಂದು ತಿಳಿಸಿದರು.

2021ರಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಸ್ಥಾಪಿತವಾದ ಈ ಸಚಿವಾಲಯವು ಈಗ 114 ಪುಟಗಳ ದಾಖಲೆಯಲ್ಲಿ ಅದರ ಕಾನೂನುಗಳನ್ನು ಔಪಚಾರಿಕಗೊಳಿಸಿದೆ. ಈ ಕಾನೂನುಗಳು ಸಾರ್ವಜನಿಕ ಸಾರಿಗೆ, ಸಂಗೀತ, ಸಾಮಾಜಿಕ ಸಂವಹನಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ವ್ಯಕ್ತಿಗಳ ನೋಟ, ಅವರ ನಡುವಳಿಕೆಯನ್ನು ಒಳಗೊಂಡಂತೆ ದೈನಂದಿನ ಜೀವನದ ವಿವಿಧ ಅಂಶಗಳನ್ನು ನಿಯಂತ್ರಿಸುತ್ತದೆ.

ಈ ಕಾನೂನಿನಲ್ಲಿನ ಆರ್ಟಿಕಲ್ 13, ಸಾರ್ವಜನಿಕವಾಗಿ ಮಹಿಳೆಯರು ಕಾಣಿಸಿಕೊಂಡಾಗ ತಮ್ಮ ದೇಹವನ್ನು ಸಂಪೂರ್ಣವಾಗಿ ಮುಚ್ಚಬೇಕು. ಬೇರೆಯವನ್ನು ಆಕರ್ಷಿಸುವುದನ್ನು ತಪ್ಪಿಸಲು ಮಹಿಳೆಯರು ಮುಖದ ಹೊದಿಕೆಗಳನ್ನು ಧರಿಸುವುದು ಅಗತ್ಯವೆಂದು ಪರಿಗಣಿಸಬೇಕು. ತೇಳುವಾದ, ಬಿಗಿಯಾದ ಹಾಗೂ ಚಿಕ್ಕದಾದ ಬಟ್ಟೆ ಧರಿಸುವುದು ನಿಷೇಧ ಎಂದು ತಿಳಿಸುತ್ತದೆ. ಅಲ್ಲದೆ ಮಹಿಳೆಯರು ಸಾರ್ವಜನಿಕವಾಗಿ ಮಾತನಾಡಬಾರದು, ಹಾಡಬಾರದು ಅಥವಾ ಗಟ್ಟಿಯಾಗಿ ಓದಬಾರದು ಎಂದು ಈ ಕಾನೂನು ಷರತ್ತು ವಿಧಿಸುತ್ತದೆ.

ಈ ಕಾನೂನಿನಲ್ಲಿ ಮಹಿಳೆಯರ ನಡುವಳಿಕೆಯನ್ನು ನಿಯಂತ್ರಿಸುವುದು ಗಮನಾರ್ಹವಾಗಿದೆ. ಈ ಕಾನೂನು ಮಹಿಳೆಯರು ಮತ್ತು ಹುಡುಗಿಯರಿಗೆ ಬೆದರಿಸುವ ವಾತಾವರಣಕ್ಕೆ ಕೊಡುಗೆ ನೀಡುತ್ತಿವೆ ಎಂದು ಯುಎನ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾನೂನಿನ ಬಗ್ಗೆ ಎಚ್ಚರಿಕೆ ನೀಡಲಾಗುತ್ತಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net