ಯುಕೆಪಿ ಹಂತ-3 ಭೂಸ್ವಾಧೀನ ದರಕ್ಕೆ ಮುದ್ರೆ

UKP
Published on

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸುವ ಮೂಲಕ ಅಧಿಕೃತ ಮುದ್ರೆ ಒತ್ತಿದೆ. ವಿಜಯಪುರ, ಬಾಗಲಕೋಟೆ, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಗದಗ ಜಿಲ್ಲೆಗಳ 5.94 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುವ ಯೋಜನೆ ಇದಾಗಿದೆ. ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ 75,563 ಎಕರೆ ಮುಳುಗಡೆಯಾಗುವ ಭೂಮಿಗಾಗಿ ಒಂದೇ ಹಂತದಲ್ಲಿ ಒಪ್ಪಂದದ ದರ ಅಥವಾ ಭೂ ಖರೀದಿ ಮುಖಾಂತರ ಭೂಸ್ವಾಧೀನ ಮಾಡಲಾಗುತ್ತದೆ.

ಮುಳುಗಡೆ ಖುಷ್ಕಿ (ಒಣ) ಜಮೀನಿಗೆ ಪ್ರತಿ ಎಕರೆಗೆ 30 ಲಕ್ಷ ರೂ. ಮತ್ತು ತರಿ ಜಮೀನಿಗೆ 40 ಲಕ್ಷ ರೂ. ನಿಗದಿ ಮಾಡಲಾಗಿದೆ. ಕಾಲುವೆ ಜಮೀನು ಭೂಸ್ವಾಧೀನಕ್ಕೆ ಖುಷ್ಕಿ(ಒಣ) ಭೂಮಿ ಪ್ರತಿ ಎಕರೆಗೆ 25 ಲಕ್ಷ ರೂ., ತರಿ ಭೂಮಿಗೆ 30 ಲಕ್ಷ ರೂ. ನಿಗದಿ ಮಾಡಿದೆ.

ನೇರ ಖರೀದಿ/ಒಪ್ಪಂದ ದರ ಮೂಲಕ ಭೂ ಪರಿಹಾರ ಪಾವತಿಸಲು ಜಲ ಸಂಪನ್ಮೂಲ ಇಲಾಖೆಯು ಕಂದಾಯ ಇಲಾಖೆಯೊಂದಿಗೆ ಸಮಾಲೋಚಿಸಿ ಪ್ರತ್ಯೇಕ ಆದೇಶ ಹೊರಡಿಸುತ್ತದೆ.

ವಿವಿಧ ಹಂತಗಳಲ್ಲಿರುವ ಭೂಸ್ವಾಧೀನ ಪ್ರಕ್ರಿಯೆಯನ್ನು ಹೊಸ ಭೂಸ್ವಾಧೀನ ಕಾಯ್ದೆ-2013ರ ಸೆಕ್ಷನ್ 23(ಎ) ಮತ್ತು 30(ಎ) ಅನ್ವಯ ಸೂಕ್ತ ಕ್ರಮವಹಿಸಲು ಬಾಗಲಕೋಟೆಯ ಭೂಸ್ವಾಧೀನ ಆಯುಕ್ತರಿಗೆ ಸೂಚಿಸಲಾಗಿದೆ. ಭೂಸ್ವಾಧೀನ ಮತ್ತು ಪುನರ್ವಸತಿ ಹಾಗೂ ಮರು ನಿರ್ಮಾಣಕ್ಕೆ ಅಗತ್ಯ ಇರುವ ಹೆಚ್ಚುವರಿ 75 ಕೋಟಿ ರೂ. ಅನ್ನು ಮುಂದಿನ 4 ವರ್ಷಗಳಲ್ಲಿ ಭರಿಸಲು ವಾರ್ಷಿಕ 18 ಸಾವಿರ ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಕಲ್ಪಿಸುವುದು ಎಂದು ಜಲ ಸಂಪನ್ಮೂಲ ಇಲಾಖೆ ಆದೇಶದಲ್ಲಿ ಉಲ್ಲೇಖಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net