

ಲಂಡನ್: ಕರೊನಾ ವೈರಸ್ ಸೋಂಕಿಗೆ ತುತ್ತಾಗಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯ ಮತ್ತಷ್ಟು ಬಿಗಡಾಯಿಸಿದ್ದು ಅವರನ್ನು ಐಸಿಯುಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಅವರಲ್ಲಿ ಒಂದು ವಾರದ ಹಿಂದೆ ಕರೊನಾ ಲಕ್ಷಣ ಕಾಣಿಸಿಕೊಂಡಿತ್ತು. ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇದ್ದರು. ಭಾನುವಾರ ಕರೊನಾ ಲಕ್ಷಣ ಸ್ವಲ್ಪ ಹೆಚ್ಚಾಗಿಯೇ ಕಂಡುಬಂದಿದ್ದರಿಂದ ಲಂಡನ್ನ ಸೇಂಟ್ ಥಾಮಸ್ ಆಸ್ಪತ್ರೆಗೆ ದಾಖಲಾಗಿದ್ದರು.
ಬೋರಿಸ್ ಜಾನ್ಸನ್ ಐಸಿಯುಗೆ ಸ್ಥಳಾಂತರಗೊಂಡ ಬಗ್ಗೆ ಅವರ ಕಚೇರಿಯಿಂದ ಸೋಮವಾರ ಅಧಿಕೃತ ಮಾಹಿತಿ ಬಿಡುಗಡೆ ಆಗಿದೆ.
ಕರೊನಾ ವೈರಸ್ಗೆ ತುತ್ತಾಗಿರುವ ಪ್ರಧಾನಿ ಬೋರಿಸ್ ಜಾನ್ಸನ್ ಆರೋಗ್ಯದಲ್ಲಿ ಮತ್ತಷ್ಟು ಏರುಪೇರಾಗಿದೆ. ವೈದ್ಯಕೀಯ ತಂಡದ ಸಲಹೆಯಂತೆ ಅವರನ್ನು ಐಸಿಯುಗೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಐಸಿಯುಗೆ ದಾಖಲಾಗುವ ಕೆಲವೇ ಕ್ಷಣದ ಮೊದಲು ಟ್ವೀಟ್ ಮಾಡಿರುವ ಬೋರಿಸ್ ಜಾನ್ಸನ್, ಒಂದು ದಿನ ಆಸ್ಪತ್ರೆಯಲ್ಲಿ ಕಳೆದಿದ್ದೇನೆ. ಕರೊನಾ ವಿರುದ್ಧ ಹೋರಾಡುತ್ತೇನೆ. ಉತ್ಸಾಹದಲ್ಲಿಯೇ ಇದ್ದೇನೆ. ಹಾಗೇ ನಾನು ನನ್ನ ಅಧಿಕಾರಿಗಳ ತಂಡದೊಂದಿಗೆ ಸಂಪರ್ಕದಲ್ಲಿದ್ದೇನೆ. ಇಡೀ ದೇಶದ ಜನರನ್ನು ರಕ್ಷಣೆ ಮಾಡಲು ನಾವೆಲ್ಲ ಬದ್ಧರಾಗಿದ್ದೇವೆ ಎಂದು ಹೇಳಿದ್ದರು.
ಬೋರಿಸ್ ಜಾನ್ಸನ್ ಅವರಿಗೆ ಕರೊನಾ ವೈರಸ್ ಇರುವುದು ಮಾ.26ರಂದು ದೃಢಪಟ್ಟಿತ್ತು. ಅಂದಿನಿಂದಲೂ ತಮ್ಮ ಡಾನಿಂಗ್ ಸ್ಟ್ರೀಟ್ನ ನಿವಾಸದಲ್ಲಿ ಕ್ವಾರಂಟೈನ್ನಲ್ಲಿ ಇದ್ದರು. ಅಷ್ಟಾದರೂ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ಸಭೆ ನಡೆಸುತ್ತಿದ್ದರು. ದೇಶದ ಆಡಳಿತ ಮಾಡುತ್ತಿದ್ದರು. (ಏಜೆನ್ಸೀಸ್)