ಲೋಕಸಭೆ ಚುನಾವಣೆ; ಉಗ್ರ ಕಸಬ್​ನನ್ನು ಗಲ್ಲಿಗೇರಿಸುವಂತೆ ವಾದ ಮಂಡಿಸಿದ್ದ ವಕೀಲನಿಗೆ ಟಿಕೆಟ್ ನೀಡಿದ ಬಿಜೆಪಿ

Ujjwal Nikam
Published on

ಮುಂಬೈ: 18ನೇ ಸಾರ್ವತ್ರಿಕ ಚುನಾವಣೆಯ ನಿಮಿತ್ತ ಬಿಜೆಪಿ ತನ್ನ ಅಭ್ಯರ್ಥಿಗಳ 15ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅಚ್ಚರಿ ಎಂಬಂತೆ 26/11 ದಾಳಿಯ ಉಗ್ರ ಅಜ್ಮಲ್ ಕಸಬ್​​ನನ್ನು ಗಲ್ಲಿಗೇರಿಸುವಂತೆ ಸರ್ಕಾರದ ಪರ ವಾದ ಮಂಡಿಸಿದ್ದ ವಕೀಲ ಉಜ್ವಲ್​ ನಿಕಮ್​ ಅವರಿಗೆ ಟಿಕೆಟ್ ಘೋಷಿಸಿದೆ.

ಮುಂಬೈ ನಾರ್ತ್ ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಉಜ್ವಲ್​​ ಅವರನ್ನು ಬಿಜೆಪಿ ಕಣಕ್ಕಿಳಿಸಿದ್ದು, ಹಾಲಿ ಸಂಸದೆ ಪೂನಂ ಮಹಾಜನ್​ಗೆ ಟಿಕೆಟ್​ ನಿರಾಕರಿಸಲಾಗಿದೆ. 2009 ರಿಂದ 2014 ರವರೆಗೆ ಸಂಸದರಾಗಿದ್ದ ಕಾಂಗ್ರೆಸ್‌ನ ಪ್ರಿಯಾ ದತ್ ಅವರನ್ನು ಸೋಲಿಸಿ ಪೂನಂ ಮಹಾಜನ್ 2014 ಮತ್ತು 2019 ರಲ್ಲಿ ಸಂಸದೆಯಾಗಿದ್ದರು.

ಯಾರು ಈ ಉಜ್ವಲ್​ ನಿಕಮ್

ಉಜ್ವಲ್ ನಿಕಮ್ ದೇಶದ ಅತ್ಯಂತ ಪ್ರಸಿದ್ಧ ಸರ್ಕಾರಿ ವಕೀಲರಲ್ಲಿ ಒಬ್ಬರಾಗಿದ್ದು, 26/11ರ ಮುಂಬೈ ದಾಳಿಯ ಉಗ್ರ ಅಜ್ಮಲ್​ ಕಸಬ್​ನನ್ನು ಗಲ್ಲಿಗೇರಿಸುವಂತೆ ವಾದ ಮಂಡಿಸಿದ್ದರು. ಇದಲ್ಲದೆ 1993ರ ಸರಣಿ ಬಾಂಬ್​ ಸ್ಫೋಟ, ಗುಲ್ಶನ್ ಕುಮಾರ್ ಹತ್ಯೆ, ಪ್ರಮೋದ್​ ಮಹಾಜನ್​ ಹತ್ಯೆ ಪ್ರಕರಣಗಳಲ್ಲಿ ಸರ್ಕಾರದ ಪರ ವಾದ ಮಂಡಿಸಿ ಖ್ಯಾತಿ ಪಡೆದಿದ್ದಾರೆ.

ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ ಹಾಲಿ ಸಂಸದೆ ಪೂನಂ ಮಹಾಜನ್​ ಕುರಿತು ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾದ ಹಿನ್ನೆಲೆ ಅವರಿಗೆ ಟಿಕೆಟ್​ ಕೈತಪ್ಪಿರುವುದಾಗಿ ತಿಳಿದು ಬಂದಿದೆ. ಈ ಸ್ಥಾನಕ್ಕಾಗಿ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರನ್ನು ಸಹ ಬಿಜೆಪಿ ಸಂಪರ್ಕಿಸಿತ್ತು ಎಂದು ಕೆಲವು ಮೂಲಗಳು ಹೇಳಿವೆ. 2009 ರಿಂದ 2014 ರವರೆಗೆ ಸಂಸದರಾಗಿದ್ದ ಕಾಂಗ್ರೆಸ್‌ನ ಪ್ರಿಯಾ ದತ್ ಅವರನ್ನು ಸೋಲಿಸಿ ಪೂನಂ ಮಹಾಜನ್ 2014 ಮತ್ತು 2019 ರಲ್ಲಿ ಸಂಸದೆಯಾಗಿದ್ದರು.

ಪೂನಂ ಮಹಾಜನ್ 2006 ರಲ್ಲಿ ತನ್ನ ತಂದೆ ಪ್ರಮೋದ್ ಮಹಾಜನ್ ಹತ್ಯೆಯ ನಂತರ ಬಿಜೆಪಿ ಸೇರಿದ್ದರು. 2009 ರಲ್ಲಿ, ಅವರು ಮೊದಲ ಬಾರಿಗೆ ಘಾಟ್ಕೋಪರ್ ಪಶ್ಚಿಮದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಚುನಾವಣೆಯಲ್ಲಿ ಸೋತರು. 2014 ರಲ್ಲಿ ಅವರು ಮುಂಬೈ ನಾರ್ತ್ ಸೆಂಟ್ರಲ್ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಿಯಾ ದತ್​ರನ್ನು ಸೋಲಿಸಿ ಸಂಸದರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net