

ರಾಣೆಬೆನ್ನೂರ: ಜೀವನದಲ್ಲಿ ಗುರಿ ಮತ್ತು ಗುರುವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಗುರು ಮತ್ತು ಗುರಿ ಈ ಎರಡನ್ನು ಸಮಾನವಾಗಿ ಸ್ವೀಕರಿಸಿ, ಸವಾಲಾಗಿ ಎದುರಿಸಿದಾಗ ಮಾತ್ರ ಜೀವನದಲ್ಲಿ ಸಾಧಿಸಲು ಸಾಧ್ಯವಾಗುವುದು ಎಂದು ಇಲ್ಲಿಯ ಶನೇಶ್ವರ ಮಂದಿರದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಹೊರವಲಯದ ಹಿರೇಮಠ ಶನೇಶ್ವರ ಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ಉಜ್ಜಯಿನಿ ಜಗದ್ಗುರು ಲಿಂ. ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರ 88ನೇ ಪುಣ್ಯಾರಾಧನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಿದ್ದಲಿಂಗ ಶಿವಾಚಾರ್ಯರು ಪವಾಡ ಪುರುಷರು ಹಾಗೂ ಮಹಾನ್ ತಪಸ್ವಿಗಳಾಗಿ ಚಿರಪರಿಚಿತರಾಗಿದ್ದರು. ತಮ್ಮ 16ನೇ ವಯಸ್ಸಿನಲ್ಲಿ ಪಂಚಪೀಠದ ಪೀಠಾಧಿಪತಿಯಾಗಿ ಅತಿ ಕಿರಿಯ ವಯಸ್ಸಿನಲ್ಲಿಯೇ ಸಾಧನೆಯ ಮೂಲಕ ಮಹಾನುಭಾವರಾಗಿ ಸಮಾಜ ಸೇವೆ ಸಲ್ಲಿಸಿದ್ದಾರೆ ಎಂದರು.
ತಾಂತ್ರಿಕತೆಯ ಈ ಯುಗದಲ್ಲಿ ವಿಜ್ಞಾನ ಎಷ್ಟೇ ಮುಂದುವರಿದರೂ ದೇವರನ್ನು ಸ್ಮರಣೆ ಮಾಡುವುದು ತಪ್ಪಿಲ್ಲ ಹಾಗೂ ಹೋಮ- ಹವನ ಪೂಜೆ ಧಾರ್ಮಿಕ ಕಾರ್ಯಕ್ರಮಗಳನ್ನು ನಿಂತಿಲ್ಲದಿರುವುದೇ ದೇವರಿದ್ದಾನೆ ಎಂಬುದಕ್ಕೆ ನಿದರ್ಶನವಾಗಿದೆ. ಮರಗಿಡಗಳಿಲ್ಲದೆ ಪರಿಸರ ಸಂರಕ್ಷಣೆ ಮಾಡಲಾಗದೆ, ಮಾನವನು ತನ್ನ ಸ್ವಾರ್ಥಕ್ಕಾಗಿ ಇಡಿ ಪರಿಸರ ಹಾಳು ಮಾಡಿದ ಪರಿಣಾಮ ಇಂದು ಮಳೆಯು ಕಾಣೆಯಾಗಿ ಬಿಸಿಲಿನ ತಾಪ ಅತಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಉಳಿಸಲು ಪ್ರಯತ್ನಿಸಬೇಕು ಎಂದರು.
ನೀಲಗುಂದದ ಚನ್ನಬಸವ ಸ್ವಾಮೀಜಿ, ನಿಚ್ಚವ್ವನಹಳ್ಳಿಯ ಶಿವಯೋಗಿ ಹಾಲಸ್ವಾಮೀಜಿ, ಆಲೂರಿನ ಸಿದ್ದಲಿಂಗ ಸ್ವಾಮೀಜಿ, ಹಿರೇಕೆರೂರಿನ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಪ್ರಮುಖರಾದ ರವೀಂದ್ರಗೌಡ ಪಾಟೀಲ, ವಿಶ್ವರಾಧ್ಯ ಹಿರೇಮಠ, ಶಾಂತವೀರಯ್ಯ ಶಾಸ್ತ್ರೀ ಮತ್ತಿತರರು ಉಪಸ್ಥಿತರಿದ್ದರು.