

ಬೆಂಗಳೂರು: ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗವು (ಯುಜಿಸಿ) ತನ್ನ ಕರಡು ನಿಯಮಗಳನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ ಎಂದು ವಿಶ್ರಾಂತ ಕುಲಲಪತಿ ಪ್ರೊ. ಟಿ.ಡಿ. ಕೆಂಪರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕ ಮಂಗಳವಾರ ಹಮ್ಮಿಕೊಂಡಿದ್ದ ‘ಯುಜಿಸಿಯ ವಿಶ್ವವಿದ್ಯಾಲಯಗಳ ಕುಲಪತಿ ನೇಮಕಾತಿ ಕುರಿತಾದ ಹೊಸ ಕರಡು ನಿಯಾಮವಳಿಗಳ ಸಾಧಕ - ಬಾಧಕಗಳ’ ಕುರಿತ ವಿಚಾರ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಯುಜಿಸಿ ಕರಡು ನಿಯಮಗಳ ಅನ್ವಯ ಕುಲಪತಿ ನೇಮಕದಲ್ಲಿ ಸಾಕಷ್ಟು ಸಡಿಲಿಕೆ ತರಲಾಗಿದೆ. ಕುಲಪತಿಯಾಗುವವರು ಜ್ಞಾನ, ನಾಯಕತ್ವ, ಅನುಭವ. ಉನ್ನತ ಶಿಕ್ಷಣ ವ್ಯವಸ್ಥೆಗೆ ಪೂರಕವಾರಗಿರಬೇಕು. ಅದನ್ನು ಹೊರತುಪಡಿಸಿ ಉದ್ಯಮಿಗಳು, ಖಾಸಗಿ ವಲಯದವರು, ಶಿಕ್ಷಣ ವ್ಯವಸ್ಥೆಯ ಅರಿವಿಲ್ಲದವರು ಕುಲಪತಿಗಳಾಗಬಹುದು ಎಂಬ ಚಿಂತನೆ ಸಮಂಜಸವಲ್ಲ. ಶಿಕ್ಷಣ ಕ್ಷೇತ್ರದ ಅನುಭವ ಹೊಂದಿದ ಪರಿಣಿತರಿಗೆ ಕುಲಪತಿ ಹುದ್ದೆ ನೀಡಬೇಕು ಎಂದರು.
ಕುಲಪತಿ ಹುದ್ದೆ ವ್ಯಾಪಾರೀಕರಣ ಬೇಡ:
ಶಿಕ್ಷಣ ಕ್ಷೇತ್ರದಲ್ಲಿ ಅನುಭವ ಹೊಂದಿದ ಮಾತ್ರಕ್ಕೆ ಪ್ರಾಧ್ಯಾಪಕರಿಗೆ ಎಚ್‌ಎಎಲ್, ಬಿಎಚ್‌ಇಎಲ್ ಸಂಸ್ಥೆಗಳಲ್ಲಿ ನಿರ್ದೇಶಕ ಹುದ್ದೆ ಪಡೆಯಲು ಸಾಧ್ಯವೇ? ಬೇರೆ ಕ್ಷೇತ್ರದಲ್ಲಿ ಇಲ್ಲದ ಸಡಿಲಿಕೆ, ಉನ್ನತ ಶಿಕ್ಷಣದಲ್ಲಿ ಮಾತ್ರ ಏಕೆ? ,ಉನ್ನತ ಶಿಕ್ಷಣದಲ್ಲಿ ಮಾತ್ರ ಯಾಕಿಷ್ಟು ಉದಾರತೆ ಎಂದು ಪ್ರಶ್ನಿಸಿದರು. ಕುಲಪತಿ ನೇಮಕದಲ್ಲಿ ರಾಜ್ಯ ಸರ್ಕಾರವನ್ನು ಕೂಡ ಪರಿಗಣಿಸಬೇಕು. ಕುಲಪತಿ ಹುದ್ದೆ ವ್ಯಾಪಾರೀಕರಣದ ಭಾಗವಾಗಬಅರದು ಎಂದು ಹೇಳಿದರು.
ಶಿಕ್ಷಣದ ಸಮಗ್ರ ಅಧ್ಯಯನ ಮತ್ತು ಪರಾಮರ್ಶೆಯಿಂದ ಮಾತ್ರ ಸದೃಡ ರಾಷ್ಟ್ರದ ಅಭಿವೃದ್ಧಿ ಸಾಧ್ಯ. ಗ್ರಾಮೀಣ ಭಾಗದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ಸೌಲಭ್ಯ ತಲುಪಿಸುವ ಶಿಕ್ಷಣ ನೀತಿ ಅನುಷ್ಠಾನವಾಗಬೇಕು. ಆ ನಿಟ್ಟಿನಲ್ಲಿ ಯುಜಿಸಿ ಶಿಕ್ಷಣ ವ್ಯವಸ್ಥೆ ಮಾರ್ಪಡುಗಳನ್ನು ಮಾಡಬೇಕಾಗಿದೆ ಎಂದರು.
ಈ ವೇಳೆ ಕೋಶಾಧಿಕಾರಿ ಜಿ.ಕೃಷ್ಣಮೂರ್ತಿ, ವಿಜ್ಞಾನ ನಿಖಾಯದ ಡೀನ್ ಪ್ರೊ. ಅಶೋಕ್ ಡಿ. ಹಂಜಗಿ, ಶಿಕ್ಷಣ ನಿಖಾಯ ಡೀನ್ ಪ್ರೊ. ಪಿ.ಸಿ.ಕೃಷ್ಣಮೂರ್ತಿ, ಪ್ರೊ. ಮುರಳೀಧರ್ ಉಪಸ್ಥಿತರಿದ್ದರು.