

ಬೆಂಗಳೂರು: ಕೇಂದ್ರೀಯ ವಿಶ್ವವಿದ್ಯಾಲಯಗಳ ಪದವಿ ಕೋರ್ಸ್ ಪ್ರವೇಶಕ್ಕೆ ಕಡ್ಡಾಯವಾಗಿರುವ ಸಾಮಾನ್ಯ ಪ್ರವೇಶ ಪರೀಕ್ಷೆ ವ್ಯವಸ್ಥೆಯನ್ನು ರಾಜ್ಯ ಸರ್ಕಾರಿ ಅಧೀನದ ವಿವಿಗಳಿಗೂ ಅನ್ವಯಗೊಳಿಸಲು ಯುಜಿಸಿ ತರಾತುರಿ ತೋರುತ್ತಿದೆ. ಈ ನಡುವೆ, ಇದಕ್ಕೆ ಭಾರಿ ವಿರೋಧವೂ ವ್ಯಕ್ತವಾಗುತ್ತಿದ್ದು, ಎಸ್ಎಫ್ಐ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಸೋಮವಾರವಷ್ಟೇ ರಾಜ್ಯದ 25 ವಿವಿಗಳ ಕುಲಪತಿಗಳೊಂದಿಗೆ ಸಭೆ ನಡೆಸಿದ್ದ ಯುಜಿಸಿ ಅಧ್ಯಕ್ಷ ಜಗದೀಶಕುಮಾರ್, ವಿವಿಗಳಿಗೆ ಎನ್ಟಿಎ ವೆಬ್ಸೈಟ್ನಲ್ಲಿ ನೋಂದಣಿಯಾಗುವಂತೆ ಸೂಚಿಸಿದ್ದಾರೆ. ರಾಜ್ಯ ಸರ್ಕಾರಿ ವಿಶ್ವವಿದ್ಯಾಲಯಗಳ ಮನವೊಲಿಕೆಗೆ ಮುಂದಾಗಿರುವ ಯುಜಿಸಿ, ಪ್ರವೇಶ ಪರೀಕ್ಷೆಗೆ ವಿದ್ಯಾರ್ಥಿಗಳ ನೊಂದಣಿ ಆರಂಭವಾಗಿರುವ ಬೆನ್ನಲ್ಲೇ, ಇದರಲ್ಲಿ ಪಾಲ್ಗೊಳ್ಳಲು ಬಯಸುವ ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ-ಎನ್ಟಿಎ) ವೆಬ್ಸೈಟ್ನಲ್ಲಿ ನೋಂದಣಿ ಮಾಡಿಕೊಳ್ಳತಕ್ಕದ್ದು ಎಂದು ಪ್ರಕಟಿಸಿದೆ.
ಆದರೆ, ಈ ಪ್ರವೇಶ ಪರೀಕ್ಷೆಯನ್ನು ಉಪಯೋಗಿಸಿಕೊಳ್ಳಲು ಯುಜಿಸಿ ಅಥವಾ ಎನ್ಟಿಎ ಜತೆಗೆ ಯಾವುದೆ ಒಪ್ಪಂದ ಅಥವಾ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಬೇಕಿಲ್ಲ. ನೋಂದಣಿಗೆ ಯಾವುದೇ ಶುಲ್ಕ ಪಾವತಿಸಬೇಕಿಲ್ಲ ಎಂದು ಜಗದೀಶಕುಮಾರ್ ಹೇಳಿದ್ದಾರೆ. ಪದವಿ ಕೋರ್ಸ್ಗಳ ಪ್ರವೇಶಕ್ಕಾಗಿ ಸಿಯುಇಟಿ ಅಂಕಗಳನ್ನು ಬಳಸುವುದಾದಲ್ಲಿ, ದಾಖಲಾತಿಯನ್ನು ಈ ಪರೀಕ್ಷೆಯ ರ‍್ಯಾಂಕಿಂಗ್ ಮೂಲಕ ಮಾಡಿಕೊಳ್ಳುವುದಾದಲ್ಲಿ ನೋಂದಣಿ ಮಾಡಿಕೊಂಡರೆ ಸಾಕು ಎಂದು ವಿವಿಗಳಿಗೆ ಸ್ಪಷ್ಟಪಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಪ್ರವೇಶದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಸಿಯುಇಟಿ ಅಂಕಗಳನ್ನು ಒದಗಿಸಿದಾಗ, ವಿವಿಗಳಿಗೆ ಎನ್ಟಿಎ ಮೂಲಕ ಒದಗಿಸಲಾಗುವ ದತ್ತಾಂಶಗಳ ಆಧಾರದಲ್ಲಿ ಅವುಗಳ ನೈಜತೆ ಪರಿಶೀಲಿಸಬಹುದು ಎಂದು ಹೇಳಿದ್ದಾರೆ.
ಪ್ರತಿಭಟನೆಗೆ ಎಸ್ಎಫ್ಐ ನಿರ್ಧಾರ: ಪಿಯು ಶಿಕ್ಷಣಕ್ಕೆ ಮಾರಕವಾಗಿರುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ (ಎಸ್ಎಫ್ಐ) ತಿಳಿಸಿದೆ. ಶಿಕ್ಷಣ ವ್ಯವಸ್ಥೆಯನ್ನು ಇದು ಹಾಳು ಮಾಡಲಿದೆ. ಬಡ ಹಾಗೂ ಮಧ್ಯಮ ವರ್ಗದವರು ಉನ್ನತ ಶಿಕ್ಷಣ ಪಡೆಯುವ ಪ್ರಮಾಣ ಕಡಿಮೆಯಿದೆ. ಸಿಯುಇಟಿ ಜಾರಿಯಾದಲ್ಲಿ ಈ ಪ್ರಮಾಣ ಇನ್ನಷ್ಟು ಕಡಿಮೆಯಾಗಲಿದೆ ಎಂದು ಎಸ್ಎಫ್ಐ ಹೇಳಿದೆ. ಸರ್ಕಾರ ಇಂಥ ಕ್ರಮಗಳಿಂದ ದೂರವಿರುವಂತೆ ಒತ್ತಾಯಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದೆ.
ಪಿಯು ಶಿಕ್ಷಣದ ಮೇಲೆ ಪರಿಣಾಮ: ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯು ಪಿಯು ಹಂತದ ಶಿಕ್ಷಣದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಎರಡು ವರ್ಷಗಳ ಓದಿನ ಮಹತ್ವವನ್ನೇ ಕುಗ್ಗಿಸಿಬಿಡುತ್ತದೆ. ನಾಮ್ ಕೇ ವಾಸ್ತೆ ಇದನ್ನು ಓದಬೇಕು ಎಂಬಂತಾಗುತ್ತದೆ. ವಿದ್ಯಾರ್ಥಿಗಳು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಿಂತಲೂ ಎಂಟ್ರೆನ್ಸ್ ಎಕ್ಸಾಮ್ಳ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ ಎನ್ನುವ ಅಭಿಪ್ರಾಯ ಬೆಂಗಳೂರಿನ ಜಯನಗರದ ಜೆಎಸ್ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ವಿ. ಮೀನಾಲೋಚನಿಯವರದ್ದು. ಪ್ರವೇಶ ಪರೀಕ್ಷೆಗೆ ಹೆಚ್ಚಿನ ತಯಾರಿ ನಡೆಸಬೇಕಾದ ಅನಿವಾರ್ಯತೆಯಲ್ಲಿ ವಿದ್ಯಾರ್ಥಿಗಳು ಅದಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗುತ್ತದೆ. ಇದನ್ನು ಪಾಸು ಮಾಡುವುದು ಸುಲಭವಾಗಿರುವುದಿಲ್ಲ. ಹೀಗಾಗಿ ಹೆಚ್ಚಿನವರು ಉನ್ನತ ಶಿಕ್ಷಣದಿಂದ ದೂರಾಗುವ ವಾತಾವರಣವೂ ಇಲ್ಲದಿಲ್ಲ ಎಂಬ ಕಳವಳವೂ ಇವರದ್ದಾಗಿದೆ.