

ಉಡುಪಿ: ಕೃಷ್ಣ ಮಠದಲ್ಲಿ ವಿಜಯದಶಮಿ ಅಂಗವಾಗಿ ಸೋಮವಾರ ಸಂಪ್ರದಾಯದಂತೆ ಕದಿರು ಕಟ್ಟುವ ಕಾರ್ಯಕ್ರಮ ನಡೆಯಿತು. ಸೋದೆ ಮಠದಲ್ಲಿ ಕದಿರನ್ನು ಪೂಜಿಸಿ ಮೆರವಣಿಗೆಯಲ್ಲಿ ತಂದು ಶ್ರೀಕೃಷ್ಣನ ಗರ್ಭಗುಡಿಯ ಪೂರ್ವದ್ವಾರದಲ್ಲಿ ಒಳ ಪ್ರವೇಶಿಸಿ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಉಪಸ್ಥಿತಿಯಲ್ಲಿ ಪರ್ಯಾಯ ಮಠದ ಪಾರುಪತ್ಯಗಾರ ಲಕ್ಷ್ಮೀಶ ಆಚಾರ್ಯ ನೇತೃತ್ವದಲ್ಲಿ ಕೃಷ್ಣ ದೇವರ ಮುಂಭಾಗ ಪೂಜೆ ನಡೆಸಲಾಯಿತು.
ನಂತರ ಬಡಗುಮಾಳಿಗೆಯಲ್ಲಿ ಗಣಪತಿ ದೇವರ ಮುಂಭಾಗ ಪೂಜಿಸಿ ಮಠದ ಎಲ್ಲೆಡೆ ಕದಿರು ಕಟ್ಟಲಾಯಿತು. ರಾಜಾಂಗಣದಲ್ಲಿ ಭಕ್ತರಿಗೆ ಕದಿರು ವಿತರಣೆ ಮಾಡಲಾಯಿತು.
ಮಠದ ದಿವಾನ ಲಕ್ಷೀನಾರಾಯಣ ಮುಚ್ಚಿಂತಾಯ, ಕೃಷ್ಣ ಮಠ ವ್ಯವಸ್ಥಾಪಕ ಗೋವಿಂದರಾಜ್, ಅದಮಾರು ಮಠದ ವ್ಯವಸ್ಥಾಪಕ ರಾಘವೇಂದ್ರ ಭಟ್ ಉಪಸ್ಥಿತರಿದ್ದರು.