

ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ, ಆಕೆ ಸಾಯುವ ಮುನ್ನವೇ ನಾಪತ್ತೆಯಾಗಿದ್ದ ಯುವಕ ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ದ್ವಿತೀಯ ವರ್ಷದ ಬಿಕಾಂ ವಿದ್ಯಾರ್ಥಿನಿ, ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ಗ್ರಾಮದ ರಕ್ಷಿತಾ ನಾಯಕ್, ಅ.24ರ ರಾತ್ರಿ ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು. ಅಂದು ಸಂಜೆ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ರಕ್ಷಿತಾಳನ್ನು ಆಟೋದಲ್ಲಿ ಕರೆತಂದ ಕೊಲ್ಲೂರು ಸಮೀಪದ ಜಡ್ಕಲ್ ನಿವಾಸಿ ಪ್ರಶಾಂತ್ ಕುಂದರ್, ಆಸ್ಪತ್ರೆಯ ಸ್ಟ್ರೆಚ್ಚರ್ಗೆ ಹಾಕಿ ಎಸ್ಕೇಪ್ ಆಗಿದ್ದ. ಇದಾದ ಕೆಲವೇ ಕ್ಷಣದಲ್ಲಿ ಯುವತಿ ಮೃತಪಟ್ಟಿದ್ದಳು. ಆಕೆಯ ಪಾಲಕರಿಗೂ ಆತನೇ ಕರೆ ಮಾಡಿ ವಿಷಯ ತಿಳಿಸಿದ್ದ. ಬಳಿಕ ಫೋನ್ ಸ್ವಿಚ್ಡ್ ಆಫ್ ಮಾಡಿಕೊಂಡಿದ್ದ.
ಮಗಳು ರಕ್ಷಿತಾಳ ಸಾವು ಅನುಮಾನಾಸ್ಪದ ಎಂದು ಪಾಲಕರು ದೂರು ದಾಖಲಿಸಿದ್ದಾರೆ. ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರು ಪ್ರಶಾಂತ್ ಕುಂದರ್ನನ್ನು ಸೋಮವಾರ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಭಾನುವಾರ ರಾತ್ರಿ ರಕ್ಷಿತಾಳ ಮರಣೋತ್ತರ ಪರೀಕ್ಷೆ ನಡೆದಿದ್ದು, ವರದಿ ಬಂದ ಬಳಿಕ ಸಾವು ಕೊಲೆಯೋ/ಆತ್ಮಹತ್ಯೆಯೋ ಎಂಬುದು ತಿಳಿಯಲಿದೆ. ರಕ್ಷಿತಾಳ ದೇಹದಲ್ಲಿ ಆಲ್ಕೋಹಾಲ್ ಅಂಶ, ಕುತ್ತಿಗೆ ಭಾಗದಲ್ಲಿ ರಕ್ತ ಹೆಪ್ಪುಗಟ್ಟಿದ ಗಾಯಗಳು ಇತ್ತು ಎನ್ನುವ ಮಾಹಿತಿ ಲಭ್ಯವಾಗಿದೆ. ಆರೋಪಿ ಪ್ರಶಾಂತ್ ಕುಂದರ್ ರಕ್ಷಿತಾಳ ಪ್ರಿಯಕರ. ಆತನಿಗೆ ಈಗಾಗಲೇ ಮದುವೆ ಆಗಿದ್ದರೂ ರಕ್ಷಿತಾಳನ್ನು ಪ್ರೀತಿಬಲೆಗೆ ಬೀಳಿಸಿಕೊಂಡಿದ್ದ ಎಂದು ಗೊತ್ತಾಗಿದೆ. ಆದ್ರೆ ಸಾವಿನ ರಹಸ್ಯ ಇನ್ನೂ ಬಯಲಾಗಿಲ್ಲ.