ಮತದಾರರಲ್ಲದವರು ನಾಳೆಯೇ ಕ್ಷೇತ್ರ ತೊರೆಯಿರಿ

DCmeeting
ಉಡುಪಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಡಾ.ವಿದ್ಯಾಕುಮಾರಿ ಮಾತನಾಡಿದರು. ಮಂಜುನಾಥ್​ ಬಿ., ಗುರುರಾಜ್​, ನರೋನಾ ನಿಶ್ಚಲ್​ ಇತರರಿದ್ದರು.
Published on

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆದೇಶ -- ಲೋಕಸಭಾ ಚುನವಾಣಾ ಸಿದ್ಧತೆಯ ಸಭೆ

ಉಡುಪಿ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಏ.26ರಂದು ಚುನಾವಣೆ ನಡೆಯಲಿದೆ. ಹೀಗಾಗಿ ಸ್ಥಳೀಯ ಕ್ಷೇತ್ರ ವ್ಯಾಪ್ತಿಯ ಮತದಾರರಲ್ಲದ ರಾಜಕೀಯ ಮುಖಂಡರು, ಕಾರ್ಯಕರ್ತರು, ಸ್ಟಾರ್​ ಪ್ರಚಾರಕರು, ಮೆರವಣಿಗೆ ಆಯೋಜಕರು ಸೇರಿದಂತೆ ಇನ್ನಿತರರು ಏ.24ರ ಸಂಜೆ 6 ಗಂಟೆಯೊಳಗೆ ಕ್ಷೇತ್ರ ತೊರೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ.

ಉಡುಪಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಲೋಕಸಭಾ ಚುನಾವಣಾ ಸಿದ್ಧತೆ ಹಾಗೂ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅನುಸರಿಸಬೇಕಾದ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿದರು.

ಬಹಿರಂಗ ಪ್ರಚಾರ ಇಲ್ಲ

ಪಾರದರ್ಶಕ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಅವಣೆ ನಡೆಯಬೇಕಾದ ಹಿನ್ನೆಲೆಯಲ್ಲಿ ಮತದಾನದ 48 ಗಂಟೆ ಮುಂಚಿತವಾಗಿ ಯಾವುದೇ ರೀತಿಯ ಬಹಿರಂಗ ಪ್ರಚಾರ ಕೈಗೊಳ್ಳಲು ಅನುಮತಿಯಿಲ್ಲ. ಧ್ವನಿವರ್ಧಕ ಬಳಸುವಂತಿಲ್ಲ. ಆದರೆ, ಮನೆಮನೆಗೆ ಭೇಟಿ ನೀಡಿ ಪ್ರಚಾರ ಮಾಡಲು ಅನುಮತಿ ಇದೆ ಎಂದರು.

ಅನುಮತಿ ಕಡ್ಡಾಯ

ಮತದಾನಕ್ಕೆ 48 ಗಂಟೆಗಳ ಮುಂಚೆ ಯಾವುದೇ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುವುದಿದ್ದರೂ ಸಂಬಂಧಪಟ್ಟ ಅಭ್ಯರ್ಥಿಗಳು ಅಥವಾ ಪಕ್ಷಗಳು ಮಾಧ್ಯಮ ಪ್ರಾಮಾಣೀಕರಣ ಸಮಿತಿಯಿಂದ ಪ್ರಮಾಣಪತ್ರ ಪಡೆಯುವುದು ಕಡ್ಡಾಯ. ಯಾವುದೇ ಚುನಾವಣೋತ್ತರ ಸಮೀಕ್ಷೆ ಅಥವಾ ಸಮೀಕ್ಷಾ ಫಲಿತಾಂಶ ಪ್ರಕಟಿಸುವಂತಿಲ್ಲ ಎಂದರು.

ಎರಡು ದಿನ ನಿಷೇಧಾಜ್ಞೆ

ಮತದಾನದ ಕೊನೆಯ 48 ಗಂಟೆ ಅವಧಿಗೆ ಒಬ್ಬ ಅಭ್ಯರ್ಥಿಗೆ ಮೂರು ವಾಹನ ಬಳಕೆಗೆ ಮಾತ್ರ ಅವಕಾಶವಿದೆ. ಅಭ್ಯರ್ಥಿಯ ಅನುಪಸ್ಥಿತಿಯಲ್ಲಿ ಇತರರು ಅಭ್ಯರ್ಥಿಗೆ ನೀಡಿದ ವಾಹನ ಉಪಯೋಗಿಸುವಂತಿಲ್ಲ. ಅನುಮತಿ ಪಡೆದ ವಾಹನಗಳಲ್ಲಿ 5 ಜನ ಮಾತ್ರ ಪ್ರಯಾಣಿಸಬಹುದು. 5 ಜನಕ್ಕಿಂತ ಹೆಚ್ಚು ಜನ ಸೇರದಂತೆ ಸಿಆರ್​ಪಿಸಿ ಕಲಂ 144ರಡಿ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಏ. 24ರಂದು ಸಂಜೆ 5ರಿಂದ ಏ.26 ರ ಮಧ್ಯರಾತ್ರಿ 12ರ ವರೆಗೆ ಜಿಲ್ಲಾದ್ಯಂತ ಮದ್ಯ ಮಾರಾಟ ಹಾಗೂ ಸರಬರಾಜು ನಿಷೇಧಿಸಲಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್​ ಬಿ., ತಹಸೀಲ್ದಾರ್​ ಗುರುರಾಜ್​, ಚುನಾವಣಾ ತಹಸೀಲ್ದಾರ್​ ನರೋನಾ ನಿಶ್ಚಲ್​, ಅಭ್ಯರ್ಥಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಮತಗಟ್ಟೆ ಬಳಿ ಟೆಂಟ್​ ತೆರೆಯುವಂತಿಲ್ಲ

ಮತಗಟ್ಟೆಯ 100 ಮೀ. ಅಂತರದೊಳಗೆ ಮೊಬೈಲ್​ ಬಳಕೆ ನಿಷೇಧಿಸಲಾಗಿದೆ. ಅಲ್ಲದೆ, ಎಲ್ಲ ರೀತಿಯ ಪ್ರಚಾರ ನಿರ್ಬಂಧಿಸಲಾಗಿದೆ. ಮತಗಟ್ಟೆಯಿಂದ 200 ಮೀ. ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ಟೆಂಟ್​ ತೆರೆಯುವಂತಿಲ್ಲ. 200 ಮೀ.ನಿಂದ ಹೊರಗೆ ತೆರೆಯಲೂ ಸಹ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯಬೇಕು. ಈ ಟೆಂಟ್​ನಲ್ಲಿ ಕೇವಲ ಇಬ್ಬರು ಕಾರ್ಯರ್ತರಿಗೆ ಸಾಕಾಗುವಷ್ಟು ಮಾತ್ರ ಟಾರ್ಪಲಿನ್​ ಅಥವಾ ಛತ್ರಿಯ ಮೇಲ್ಛಾವಣಿ ಅಳವಡಿಸಬಹುದು. ಎರಡು ಕುರ್ಚಿ, ಒಂದು ಮೇಜು ಇಡಬಹುದಾಗಿದೆ. ಪ್ರತಿ ಮತಗಟ್ಟೆಗೆ ಒಬ್ಬ ಪೋಲಿಂಗ್​ ಏಜೆಂಟ್​, ಇಬ್ಬರು ರಿಲೀಫ್​ ಏಜೆಂಟ್​ ನೇಮಿಸಿಕೊಳ್ಳಬಹುದು. ಅವರು ಮತಗಟ್ಟೆಯಲ್ಲಿ ನಿರ್ದಿಷ್ಟ ಸ್ಥಳದಲ್ಲಿಯೇ ಆಸೀನರಾಗಬೇಕು. ಮತಗಟ್ಟೆಯಲ್ಲಿ ಜನಪ್ರತಿನಿಧಿ ಕಾಯ್ದೆ ಪ್ರಕಾರ ಮತದಾನದ ಗೌಪ್ಯತೆ ಕಾಪಾಡಬೇಕು ಎಂದು ಡಿಸಿ ವಿದ್ಯಾಕುಮಾರಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net