ಉಡುಪಿ ಪ್ರಕರಣದ ಆರೋಪಿಗಳಿಗೆ ತಕ್ಕ ಶಿಕ್ಷೆ ನೀಡಲು ಆಗ್ರಹ; ಎಬಿವಿಪಿ ಕಾರ್ಯಕರ್ತರಿಂದ ಮನವಿ ಸಲ್ಲಿಕೆ

27-RNR-03
Published on

ರಾಣೆಬೆನ್ನೂರ: ಉಡುಪಿಯ ಖಾಸಗಿ ಪ್ಯಾರಾ ಮೆಡಿಕಲ್ ಕಾಲೇಜ್‌ನಲ್ಲಿ ನಡೆದ ಘಟನೆ ಖಂಡಿಸಿ ಹಾಗೂ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಇಲ್ಲಿಯ ಎಬಿವಿಪಿ ಕಾರ್ಯಕರ್ತರು ಗುರುವಾರ ಉಪ ತಹಸೀಲ್ದಾರ ವೀಣಾ ಕಲ್ಲಮ್ಮನವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ಯಾರಾ ಮೆಡಿಕಲ್ ಕಾಲೇಜ್‌ನ ಶೌಚಗೃಹದಲ್ಲಿ ಅನ್ಯ ಕೋಮಿನ ವಿದ್ಯಾರ್ಥಿನಿಯರು ಐ ಮೊಬೈಲ್ ಫೋನ್ ಮೂಲಕ ಹಿಂದು ವಿದ್ಯಾರ್ಥಿನಿಯರ ಶೌಚಕ್ರಿಯೆಯ ವಿಡಿಯೋ ಚಿತ್ರೀಕರಣ ಮಾಡಿರುವುದು ಖೇದಕರ ಸಂಗತಿಯಾಗಿದೆ. ವಿಷಯ ಬೆಳಕಿಗೆ ಬಂದ ನಂತರ ಕಾಲೇಜ್‌ನ ಆಡಳಿತ ಮಂಡಳಿಯು ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರನ್ನು ಕಾಲೇಜ್‌ನಿಂದ ವಜಾ ಮಾಡಿ ಸುಮ್ಮನಾಗಿದ್ದಾರೆ.
ಆದರೆ, ಈ ಘಟನೆಯ ಹಿಂದೆ ಜಿಹಾದಿಗಳ ಕೈವಾಡವಿದ್ದು ವಿಡಿಯೋ ತೋರಿಸಿ ಹಿಂದು ವಿದ್ಯಾರ್ಥಿನಿಯರನ್ನು ಲವ್ ಜಿಹಾದ್ ಕೂಪಕ್ಕೆ ತಳ್ಳುವ ವ್ಯವಸ್ಥಿತ ಷಡ್ಯಂತ್ರ ಕಂಡು ಬರುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net