

ಮುಂಬೈ: ಉದ್ಧವ್ ಠಾಕ್ರೆ ಔರಂಗಜೇಬ್ ಅಭಿಮಾನಿಗಳ ಸಂಘದ ನಾಯಕ. ಔರಂಗಜೇಬ್ ಅಭಿಮಾನಿಗಳ ಸಂಘದಿಂದ ದೇಶದ ಭದ್ರತೆಯನ್ನು ಖಾತ್ರಿಪಡಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದರು.
ಮಹಾರಾಷ್ಟ್ರದಲ್ಲಿ ಆಯೋಜಿಸಿದ್ದ ಬಿಜೆಪಿ ಅಧಿವೇಶನದಲ್ಲಿ ಮಾತನಾಡಿದ ಅವರು, ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಅವರ ಉತ್ತರಾಧಿಕಾರಿ ಎಂದು ಕರೆಸಿಕೊಳ್ಳುವ ಉದ್ಧವ್ ಠಾಕ್ರೆ ಕಸಬ್‌ಗೆ ಬಿರಿಯಾನಿ ತಿನ್ನಿಸಿದ ಜನರೊಂದಿಗೆ ಕುಳಿತಿದ್ದಾರೆ. ಝಾಕಿರ್ ನಾಯ್ಕ್ ಬೆಂಬಲಿಗರ ಮಡಿಲಲ್ಲಿ ಕುಳಿತಿದ್ದೀರಿ. ಯಾಕೂಬ್ ಬಿಡುಗಡೆಗೆ ಒತ್ತಾಯಿಸುವ ಜನರೊಂದಿಗೆ ನೀವು ಕುಳಿತಿದ್ದೀರಿ. ನಿಮಗೆ ನಾಚಿಕೆಯಾಗಬೇಕು ಎಂದು ಹೇಳಿದರು. ಅಲ್ಲದೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ವಿರುದ್ಧವೂ ವಾಗ್ದಾಳಿ ನಡೆಸಿದರು.
ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಬಗ್ಗೆ ಮಾತನಾಡಿದ ಅವರು, ರಾಜಕೀಯ ಭ್ರಷ್ಟಾಚಾರದ ಮಾಸ್ಟರ್ ಮೈಂಡ್ ಎಂದು ಕರೆದರು. ಪವಾರ್ ಸಾಹೇಬರು ಹೊಸ ಭ್ರಮೆ ಹುಟ್ಟು ಹಾಕುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಲೆಲ್ಲಾ ಮರಾಠರಿಗೆ ಮೀಸಲಾತಿ ಸಿಗುತ್ತದೆ. ಶರದ್ ಪವಾರ್ ಸರ್ಕಾರ ಬಂದಾಗಲೆಲ್ಲಾ ಮರಾಠ ಮೀಸಲಾತಿ ಮುಗಿಯುತ್ತದೆ. ಗೊಂದಲ ಸೃಷ್ಟಿಸಿ ಚುನಾವಣೆ ಗೆಲ್ಲಲು ಬಯಸುತ್ತಿದ್ದಾರೆ. ಶರದ್ ಪವಾರ್ ಭಾರತದ ರಾಜಕೀಯದಲ್ಲಿ ಭ್ರಷ್ಟಾಚಾರದ ದೊಡ್ಡ ದೊರೆ ಎಂದು ಟೀಕಿಸಿದ್ದಾರೆ.
ವಿರೋಧ ಪಕ್ಷದ ನಾಯಕ ರಾಹುಲ್ಗಾಂಧಿ ಸೋತರೂ ದುರಹಂಕಾರಿಯಾಗಿದ್ದಾರೆ. ಮಹಾರಾಷ್ಟ್ರ, ಹರಿಯಾಣ ಮತ್ತು ಜಾರ್ಖಂಡ್‌ನಲ್ಲಿ ಗೆದ್ದರೆ ರಾಹುಲ್ಗಾಂಧಿ ಅವರ ದುರಂಹಕಾರ ಛಿದ್ರವಾಗಲಿದೆ. ನಾವು ಅಧಿಕಾರ ಪಡೆಯುವ ಉದ್ದೇಶದಿಂದ ಕೆಲಸ ಮಾಡುವವರಲ್ಲ. ಬಿಜೆಪಿ ಪಕ್ಷವನ್ನು ಸಿದ್ಧಾಂತದೊಂದಿಗೆ ಸ್ಥಾಪಿಸಲಾಗಿದೆ. ಮುಂದಿನ 15 ವರ್ಷಗಳ ಕಾಲ ದೇಶದಲ್ಲಿ ಬಿಜೆಪಿ ಸರ್ಕಾರ ಇರಲಿದೆ ಎಂದು ಅವರು ಹೇಳಿದರು. (ಏಜೆನ್ಸೀಸ್)