ಹತ್ಯೆಯಾದ ಕನ್ಹಯ್ಯ ಲಾಲ್ ಮಕ್ಕಳಿಗೆ ಸರ್ಕಾರಿ ಉದ್ಯೋಗ: ಮುಖ್ಯಮಂತ್ರಿ ಗೆಹ್ಲೋಟ್​ ಘೋಷಣೆ

Gehlot
Published on

ಉದಯಪುರ: ಪಾತಕಿಗಳಿಂದ ಹತ್ಯೆಯಾದ ಟೈಲರ್​ ಕನ್ಹಯ್ಯ ಲಾಲ್​ ಅವರ ಇಬ್ಬರು ಪುತ್ರರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್​ ಗೆಹ್ಲೋಟ್​ ಘೋಷಿಸಿದ್ದಾರೆ.

ರಾಜಸ್ಥಾನ ಸಂಪುಟ ಸಭೆಯಲ್ಲಿಈ ನಿರ್ಧಾರ ಕೈಗೊಳ್ಳಲಾಗಿದ್ದು, ಕನ್ಹಯ್ಯ ಏಕೈಕ ಆಧಾರವಾಗಿದ್ದರಿಂದ ಮಕ್ಕಳಿಗೆ ನೌಕರಿ ನೀಡಲು ಸರ್ಕಾರ ಮುಂದಾಗಿದೆ.

ಕನ್ಹಯ್ಯಲಾಲ್​ ಅವರ ಇಬ್ಬರು ಪುತ್ರರಾದ ಯಶ್​ ತೇಲಿ ಮತ್ತು ತರುಣ್​ ತೇಲಿ ಅವರನ್ನು ಸರ್ಕಾರಿ ಸೇವೆಗೆ ನೇಮಕ ಮಾಡಿಕೊಳ್ಳಲು ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಮುಖ್ಯಮಂತ್ರಿ ಗೆಹ್ಲೋಟ್​​ ಟ್ವೀಟ್​ ಮಾಡಿದ್ದಾರೆ.

ಮೃತ ಕನ್ಹಯ್ಯ ಲಾಲ್ ಅವರ ಕುಟುಂಬದ ಜೀವನೋಪಾಯಕ್ಕೆ ಬೇರೆ ಯಾವುದೇ ಮೂಲವಿಲ್ಲ. ಅವರ ಅವಲಂಬಿತರಿಗೆ ಕೆಲಸ ನೀಡಿದರೆ ಅವರ ಜೀವನ ಸುಗಮವಾಗಿ ನಡೆಯಲಿದೆ. ಕುಟುಂಬಕ್ಕೆ ಆರ್ಥಿಕ ಮತ್ತು ಮಾನಸಿಕ ಸಹಾಯ ಸಿಗಲಿದೆ ಗೆಹ್ಲೋಟ್​ ಹೇಳಿದ್ದಾರೆ.

ಜೂನ್ 28ರಂದು ಕನ್ಹಯ್ಯ ಲಾಲ್ ಅವರನ್ನು ಭೀಕರವಾಗಿ ಇರಿದು ಕೊಲೆ ಮಾಡಲಾಗಿತ್ತು. ಈ ಘಟನೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net