

ಉತ್ತರಪ್ರದೇಶ: ರಾಜಸ್ಥಾನದ ಉದಯಪುರದಲ್ಲಿ ನಡೆದ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ಯುವಕನನ್ನು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದಕ್ಕೆ ಲೈಕ್ ಮತ್ತು ಕಮೆಂಟ್ ಮಾಡುವ ಮೂಲಕ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ನೋಯ್ಡಾ ಎಕ್ಸ್‌ಪ್ರೆಸ್‌ವೇ ಪೊಲೀಸರು ಛಪ್ರೌಲಿ ನಿವಾಸಿ ಯುವಕನನ್ನು ಬಂಧಿಸಿದ್ದಾರೆ.
'ವೆರಿ ವೆಲ್ಡನ್ ಮೈ ಬ್ರದರ್'; ಎಕ್ಸ್‌ಪ್ರೆಸ್‌ವೇಯಲ್ಲಿರುವ ಛಪ್ರೌಲಿ ಗ್ರಾಮದ ಗ್ರಾಮಸ್ಥರು ಉದಯಪುರ ಘಟನೆಗೆ ಸಂಬಂಧಿಸಿದಂತೆ ಫೇಸ್‌ಬುಕ್‌ನಲ್ಲಿ ವಿಡಿಯೋ ವೈರಲ್ ಆಗುತ್ತಿದೆ ಎಂದು ಲಿಖಿತ ದೂರು ನೀಡಿದ್ದರು. ನೋಯ್ಡಾ ಸೆಕ್ಟರ್ -168 ರ ಛಪ್ರೌಲಿ ನಿವಾಸಿ ಆಸಿಫ್ ಖಾನ್ ಫೇಸ್‌ಬುಕ್‌ನಲ್ಲಿನ ವೈರಲ್ ವಿಡಿಯೋಗೆ ಲೈಕ್ ಮಾಡಿದ್ದು, ಅದನ್ನು ಪ್ರಶಂಸಿಸುವ 'ವೆರಿ ವೆಲ್ಡನ್ ಮೈ ಬ್ರದರ್' ಎಂದು ಕಮೆಂಟ್ ಮಾಡಿದ್ದ ಎಂದು ನೋಯ್ಡಾ ವಲಯ ಎಡಿಸಿಪಿ ರಣವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ.
ರಾಜಸ್ಥಾನದ ಉದಯಪುರದಲ್ಲಿ ನಡೆದ ಘಟನೆ ಸಂಬಂಧ ನಗರದಲ್ಲಿ ಯಾವುದೇ ಅಹಿತಕರ ವಾತಾವರಣ ಉಂಟಾಗದಂತೆ ಪೊಲೀಸರು ಸಾಮಾಜಿಕ ಜಾಲತಾಣಗಳ ಮೇಲೆ ನಿರಂತರ ನಿಗಾ ವಹಿಸಿದ್ದಾರೆ. ಪೊಲೀಸ್ ಅಧಿಕಾರಿಗಳು ಕೂಡ ಜನರೊಂದಿಗೆ ಸಭೆ ನಡೆಸುತ್ತಿದ್ದಾರೆ. ಯಾವುದೇ ಪ್ರಚೋದನಕಾರಿ ಸಂದೇಶಗಳು ಮತ್ತು ವಿಡಿಯೋಗಳ ಕಡೆ ಗಮನ ಕೊಡಬೇಡಿ ಹಾಗೇನಾದರೂ ವಿಡಿಯೋಗಳು ಇದ್ದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡುತ್ತಿದ್ದಾರೆ.