ಸಿಎಎ ವಿರುದ್ಧ ಮಾತನಾಡಿದ ಗ್ರಾಹಕನನ್ನು ಠಾಣೆಗೆ ಕರೆದೊಯ್ದು ಕೆಲಸ ಕಳೆದುಕೊಂಡಿದ್ದ ಉಬರ್ ಚಾಲಕ ಮರು ಸೇರ್ಪಡೆ

Alert Citizen
Published on

ಮುಂಬೈ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧವಾಗಿ ಮಾತನಾಡುತ್ತಿದ್ದ ಗ್ರಾಹಕರೊಬ್ಬರನ್ನು ಪೊಲೀಸ್​ ಠಾಣೆಗೆ ಕರೆದೊಯ್ದಿದ್ದ ಕಾರಣಕ್ಕೆ ಕೆಲಸದಿಂದ ಅಮಾನತ್ತಾಗಿದ್ದ ಉಬರ್​ ಕಾರು ಚಾಲಕ ಮರಳಿ ಕೆಲಸಕ್ಕೆ ಸೇರ್ಪಡೆಯಾಗಿದ್ದಾರೆ.

ಕ್ಯಾಬ್​ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿ ಚಾಲಕ ರೋಹಿತ್​ ಗೌರ್​ ಎಂಬಾತನನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು. ಕಳೆದ ಗುರುವಾರ ಕವಿ ಹಾಗೂ ಕಾರ್ಯಕರ್ತ ಬಪ್ಪದಿತ್ಯಾ ಸರ್ಕಾರ್​ ಎಂಬುವರು ಸಿಎಎ ವಿರುದ್ಧ ಮಾತನಾಡುವುದನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡಿಕೊಂಡು, ಬಳಿಕ ಅವರನ್ನು ಶಾಂತಾಕ್ರಜ್​ ಪೊಲೀಸ್​ ಠಾಣೆಗೆ ಕರೆದೊಯ್ದು ಬಂಧಿಸುವಂತೆ ಹೇಳಿದ್ದರು. ಬಳಿಕ ಮುಂಬೈ ಪೊಲೀಸರು ರಾತ್ರಿ 1 ಗಂಟೆಯವರೆಗೂ ವಿಚಾರಣೆ ನಡೆಸಿ ಯಾವುದೇ ಪ್ರಮಾದ ಇಲ್ಲದಿದ್ದರಿಂದ ಬಿಟ್ಟು ಕಳುಹಿಸಿದ್ದರು.

ಬಳಿಕ ಉಬರ್​ ಕಂಪನಿ ಚಾಲಕ ನೋಂದಣಿ ಮಾಡಿಕೊಂಡಿದ್ದ ಆ್ಯಪ್​ನ್ನು ತನಿಖಾ ದೃಷ್ಟಿಯಿಂದ ನಿಯಮಿತ ಸಮಯದವರೆಗೂ ಅಂದರೆ 48 ರಿಂದ 72 ಗಂಟೆಗಳವರೆಗು ನಿಷೇಧಿಸಿತ್ತು.​ ನಮ್ಮ ಗ್ರಾಹಕರ ಸುರಕ್ಷಿತ ದೃಷ್ಟಿಯಿಂದ ಈ ರೀತಿ ಮಾಡಬೇಕಾಯಿತು ಎಂದು ಉಬರ್​ ವಕ್ತಾರ ಹೇಳಿದ್ದರು. ವಿಶೇಷವೆಂದರೆ ಈ ಪ್ರಕರಣ ಬೆನ್ನಲ್ಲೇ ಮುಂಬೈ ಬಿಜೆಪಿ ಚಾಲಕನಿಗೆ ಅಲರ್ಟ್ ಸಿಟಿಜನ್​ ಅವಾರ್ಡ್​​ ನೀಡಿ​ ಸನ್ಮಾನವನ್ನು ಮಾಡಿತ್ತು.

ಇದೀಗ ಗೌರ್​ ಮರಳಿ ಕೆಲಸಕ್ಕೆ ಸೇರ್ಪಡೆಯಾಗಿದ್ದು, ಸದ್ಯ ಆತನನ್ನು ಸೂಕ್ಷ್ಮತೆ ಗ್ರಹಿಕೆ ತರಗತಿಗೆ ಕಳುಹಿಸಲಾಗುತ್ತಿದೆ. ಗ್ರಾಹಕರೊಂದಿಗೆ ಒಳ್ಳೆಯ ರೀತಿಯಲ್ಲಿ ವರ್ತಿಸಲು ಹಾಗೂ ಶಿಷ್ಟಾಚಾರ ಪಾಲಿಸುವುದರ ಕಡೆ ಗಮನ ಹರಿಸುವ ಸಲುವಾಗಿ ಆತನಿಗೆ ತರಬೇತಿ ನೀಡಲಾಗುತ್ತಿದೆ. ಆ್ಯಪ್​ ಆಧಾರದ ಟ್ಯಾಕ್ಸಿ ಸೇವೆ ಆರಂಭಕ್ಕೂ ಮುನ್ನ ಇದು ಎಲ್ಲ ಚಾಲಕರಿಗೂ ಕಡ್ಡಾಯವಾಗಿದೆ ಎಂದು ಉಬರ್​ ವಕ್ತಾರ ತಿಳಿಸಿದ್ದಾರೆ.

ಉತ್ತಮ ಗುಣಮಟ್ಟದ ಸೇವೆ ನೀಡಲು ನಾವು ಪ್ರತಿದಿನ ಪ್ರಯತ್ನಿಸುತ್ತಿದ್ದೇವೆ. ನಮ್ಮೊಳಗಿನ ಮೌಲ್ಯಮಾಪನ ಮಾಡಿಕೊಂಡು ನಮ್ಮ ಗುಣಮಟ್ಟವನ್ನು ಮುಟ್ಟಲು ನಮ್ಮ ನೀತಿ ಮತ್ತು ಸಮುದಾಯ ಮಾರ್ಗದರ್ಶಿಯೊಂದಿಗೆ ಸೂಕ್ಷ್ಮತೆ ಗ್ರಹಿಕೆ ತರಗತಿಗಳಿಗೆ ಚಾಲಕರನ್ನು ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net