

ಬೆಂಗಳೂರು: ವಜ್ರಮಹೋತ್ಸವದ ಸಂಭ್ರದಲ್ಲಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ (ಯುಎಎಸ್‌ಬಿ) 59ನೇ ಘಟಿಕೋತ್ಸವ ಗುರುವಾರ (ಮೇ 15) ನಡೆಯಲಿದ್ದು, 2023-24ನೇ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 1,271 ವಿದ್ಯಾರ್ಥಿಗಳು ವಿವಿಧ ಕೋರ್ಸ್‌ಗಳಲ್ಲಿ ಪದವಿ ಪಡೆಯಲಿದ್ದಾರೆ. ಬಿಎಸ್ಸಿ ಆನರ್ಸ್ ಕೃಷಿ ಪದವಿಯಲ್ಲಿ ಮಲೆನಾಡಿನ ಸೊರಬದ ಟಿ.ಎಲ್.ದೀಪ್ತಿ 13 ಚಿನ್ನದ ಪದಕಗಳೊಂದಿಗೆ ಅತಿ ಹೆಚ್ಚು ಮೆಡಲ್ ಪಡೆದ ಖ್ಯಾತಿಗೆ ಒಳಗಾಗಿದ್ದಾರೆ.
ಯುಎಎಸ್‌ಬಿ ಕುಲಾಧಿಪತಿಯೂ ಆದ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರ ಉಪಸ್ಥಿತಿಯಲ್ಲಿ ಘಟಿಕೋತ್ಸವ ನಡೆಯಲಿದ್ದು, ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಇಫ್ಕೋ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಯು.ಎಸ್.ಅವಸ್ಥಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಘಟಿಕೋತ್ಸವವು ಜಿಕೆವಿಕೆಯ ಡಾ. ಬಾಬು ರಾಜೇಂದ್ರಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆಯಲಿದೆ ಎಂದು ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ.ಸುರೇಶ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
150 ಚಿನ್ನದ ಪದಕ ವಿತರಣೆ:
ಈ ಬಾರಿಯ ಘಟಿಕೋತ್ಸವದಲ್ಲಿ 63 ಸಾಧಕ ವಿದ್ಯಾರ್ಥಿಗಳು ಒಟ್ಟು 150 ಚಿನ್ನದ ಪದಕಗಳನ್ನು ಪಡೆಯಲಿದ್ದಾರೆ. ಈ ಪೈಕಿ 49 ವಿದ್ಯಾರ್ಥಿನಿಯರು ಎಂಬುದು ವಿಶೇಷ. ಡಾಕ್ಟರ್ ಆಫ್ ಫಿಲಾಸಫಿ ಪದವಿಯಲ್ಲಿ 30, ಸ್ನಾತಕೋತ್ತರ ಪದವಿಯಲ್ಲಿ 62, ಸ್ನಾತಕ ಪದವಿಯಲ್ಲಿ 58 ಚಿನ್ನದ ಪದಕ ನೀಡಲಾಗುತ್ತದೆ ಎಂದು ಕುಲಪತಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವಿ ಕುಲಸಚಿವ ಡಾ. ಕೆ.ಸಿ.ನಾರಾಯಣಸ್ವಾಮಿ, ವಿಸ್ತರಣಾ ನಿರ್ದೇಶಕ ಡಾ. ವೈ.ಎನ್. ಶಿವಲಿಂಗಯ್ಯ, ಡಾ. ರಘುಪ್ರಸಾದ್ ಹಾಜರಿದ್ದರು.
ಪದವಿ ಪಡೆಯಲಿರುವ ವಿದ್ಯಾರ್ಥಿಗಳ ಮಾಹಿತಿ:
* ಸ್ನಾತಕ ಪದವಿ - 871
* ಸ್ನಾತಕೋತ್ತರ - 311
* ಡಾಕ್ಟೊರಲ್ - 89
* ಒಟ್ಟು ಉತ್ತೀರ್ಣರಾದವರು - 1271
ಇಬ್ಬರು ಸಾಧಕರಿಗೆ ಗೌರವ ಡಾಕ್ಟರೇಟ್:
ಈ ಬಾರಿ ಘಟಿಕೋತ್ಸವದಲ್ಲಿ ಇಬ್ಬರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ. ರೇಷ್ಮೆ ಕೃಷಿ, ಗ್ರಾಮೀಣಾಭಿವೃದ್ಧಿ ಹಾಗೂ ಆಡಳಿತ ಸುಧಾರಣೆ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಆಧರಿಸಿ ಸರ್ಕಾರದ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ಮತ್ತು ಇಫ್ಕೋ ಇ-ಬಜಾರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಯೋಗೇಂದ್ರ ಕುಮಾರ್ (ನ್ಯಾನೊ ರಸಗೊಬ್ಬರಗಳ ನಾವೀನ್ಯತೆ ಹಾಗೂ ಕೃಷಿ ಸಮುದಾಯಕ್ಕೆ ನೀಡಿದ ಕೊಡುಗೆ) ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ ಎಂದು ಕುಲಪತಿ ತಿಳಿಸಿದರು.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ತಲಕಾಲಕೊಪ್ಪ ಗ್ರಾಮದವಳಾದ ನನಗೆ ಬಿಎಸ್ಸಿ ಕೃಷಿ ಕೋರ್ಸ್‌ನಲ್ಲಿ 13 ಚಿನ್ನದ ಪದಕಗಳನ್ನು ಪಡೆದಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ಇದಕ್ಕೆ ನಮ್ಮ ತಂದೆ-ತಾಯಿ, ಗುರುಗಳು ಕಾರಣ. ಸದ್ಯ ದಿಲ್ಲಿಯ ಐಸಿಎಆರ್‌ನಲ್ಲಿ ‘ಸಸ್ಯತಳಿ ಹಾಗೂ ಅನುವಂಶೀಯ ಶಾಸ’ ವಿಭಾಗದಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿರುವೆ. ಮುಂದೆ ಸಂಶೋಧನೆ ಕ್ಷೇತ್ರದಲ್ಲಿ ಸಾಧನೆ ಮಾಡುವ ಹಂಬಲ ಇದೆ.
- ಟಿ.ಎಲ್.ದೀಪ್ತಿ, 13 ಚಿನ್ನದ ಪದಕ ಸಾಧಕ ವಿದ್ಯಾರ್ಥಿನಿ