ಭಯೋತ್ಪಾದನೆ ಪಿತೂರಿ; ಆರೋಪಿಗಳ ವಿರುದ್ಧ ಯುಎಪಿಎ ಪ್ರಕರಣ

Intruder
Published on

ನವದೆಹಲಿ: ಸಂಸತ್ತಿನ ಭದ್ರತಾಕೋಟೆ ಭೇದಿಸಿ ಲೋಕಸಭೆಯಲ್ಲಿ ಸಂಸದರ ಟೇಬಲ್ ಮೇಲೆ ಜಿಗಿದಿದ್ದ ಆಗಂತುಕರು ಕಳೆದ ಜನವರಿಯಿಂದಲೇ ದುಷ್ಕೃತ್ಯ ನಡೆಸುವ ಯೋಜನೆ ಹಾಕಿಕೊಂಡಿದ್ದ ವಿಚಾರ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ. ಆರೋಪಿಗಳ ವಿರುದ್ಧ ಯುಎಪಿಎ ಅಡಿ ಭಯೋತ್ಪಾದನಾ ಕೃತ್ಯ ಸಹಿತ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ.

ಹಳೆ ಸಂಸತ್ತಿನಲ್ಲಿ ನಡೆದ ಕಳೆದ ಬಜೆಟ್ ಅಧಿವೇಶನದ ವೇಳೆಯೂ ಅಲ್ಲಿಗೆ ಬಂದಿದ್ದ ಆರೋಪಿ ಮನೋರಂಜನ್, ಭದ್ರತಾ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿ ಹೋಗಿದ್ದ. ಮಹಿಳಾ ಮಸೂದೆ ಮಂಡನೆಗಾಗಿ ಕರೆಯಲಾಗಿದ್ದ ವಿಶೇಷ ಅಧಿವೇಶನ ಸಹಿತ ಎರಡು ಬಾರಿ ಆತ ಸಂಸತ್ತಿಗೆ ಭೇಟಿ ನೀಡಿದ್ದ. ಆ ಸಂದರ್ಭದಲ್ಲಿ ಕೂಡ ಸಂಸದ ಪ್ರತಾಪ್​ರಿಂದಲೇ ಪಾಸ್ ಪಡೆದು ತೆರಳಿದ್ದನೇ ಎಂಬ ಬಗ್ಗೆ ಖಚಿತತೆ ಇಲ್ಲ. ಸಂಸತ್ ಕಲಾಪ ವೀಕ್ಷಣೆಗೆ ಬರುವ ಸಾರ್ವಜನಿಕರನ್ನು ರಕ್ಷಣಾ ಸಿಬ್ಬಂದಿ ಹಲವು ಹಂತಗಳಲ್ಲಿ ಪರಿಶೀಲನೆ ಮಾಡಿದರೂ, ಬೂಟು ಅಥವಾ ಕಾಲಿನ ಸ್ಕಾ್ಯನ್ ಮಾಡುವುದಿಲ್ಲ. ಇದನ್ನು ಮನೋರಂಜನ್ ತನ್ನ ಮೊದಲ ಭೇಟಿಯಲ್ಲಿ ಕಂಡುಕೊಂಡಿದ್ದ. ಬೂಟು ಬಿಟ್ಟು ಬೇರೆಲ್ಲೂ ಯಾವುದೇ ವಸ್ತುವನ್ನು ಸಂಸತ್ತಿನ ಒಳಗೆ ಕೊಂಡೊಯ್ಯಲು ಸಾಧ್ಯವಿಲ್ಲ. ಹೀಗಾಗಿ ಬೂಟಿನೊಳಗೆ ಕಲರ್ ಸ್ಪ್ರೇ ಇರಿಸಿಕೊಂಡು ಹೋಗಬೇಕು ಎಂದು ಎಲ್ಲಾ ಆರೋಪಿಗಳು ರ್ಚಚಿಸಿ, ಯೋಜನೆ ರೂಪಿಸಿದ್ದರು.

ಮುಖ್ಯ ಸಂಚುಕೋರ ಬಂಧನ: ಘಟನೆಯ ಮುಖ್ಯ ಸಂಚು ಕೋರ ಲಲಿತ್ ಝಾನನ್ನು ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ. ಆತನ ಕೊನೆಯ ಲೊಕೇಶನ್ ರಾಜಸ್ಥಾನದ ನೀಮ್ರಾನಾ ಎಂಬಲ್ಲಿ ಪತ್ತೆಯಾಗಿತ್ತು. ಇದನ್ನು ಬೆನ್ನತ್ತಿದ ಪೊಲೀಸರ ತಂಡ ಆತನನ್ನು ದೆಹಲಿಯಲ್ಲಿ ಬಂಧಿಸಿದೆ.

ಉಳಿದ ಎಲ್ಲಾ ಆರೋಪಿಗಳನ್ನು ಒಟ್ಟುಗೂಡಿಸಿದ್ದ ಲಲಿತ್ ಝಾ, ಸಾಗರ್ ಶರ್ಮ, ಡಿ. ಮನೋರಂಜನ್, ನೀಲಂ ಆಜಾದ್ ಮತ್ತು ಅನ್ಮೋಲ್ ಶಿಂಧೆಯನ್ನು ದೆಹಲಿಗೆ ಬರುವಂತೆ ಮಾಡಿ, ವಿಶಾಲ್ (ವಿಕ್ಕಿ) ಶರ್ಮ ಎಂಬಾತನ ಗುರುಗ್ರಾಮದ ಮನೆಯಲ್ಲಿ ಉಳಿದುಕೊಳ್ಳುವಂತೆ ವ್ಯವಸ್ಥೆ ಮಾಡಿದ್ದ. ವಿಶಾಲ್ ಶರ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಸಂಸತ್ತಿನ ಹೊರಗೆ ನೀಲಂ ಮತ್ತು ಅಮೊಲ್ ಶಿಂಧೆ ಪ್ರತಿಭಟನೆ ನಡೆಸಿದ್ದ ವೇಳೆ ಲಲಿತ್ ಝಾ ಕೂಡ ಸ್ಥಳದಲ್ಲಿದ್ದ. ಆದರೆ, ಪೊಲೀಸರು ಬರುತ್ತಿದ್ದಂತೆಯೇ ಆತ ಸ್ಥಳದಿಂದ ಕಾಲ್ಕಿತ್ತಿದ್ದಾನೆ.

ಲಲಿತ್ ಮೂಲತಃ ಕೊಲ್ಕತ್ತಾದವನಾಗಿದ್ದು, ವೃತ್ತಿಯಲ್ಲಿ ಶಿಕ್ಷಕನಾಗಿದ್ದಾನೆ. ಹೋರಾಟಗಾರ ಭಗತ್ ಸಿಂಗ್​ರಿಂದ ಪ್ರೇರೇಪಣೆ ಪಡೆದುಕೊಂಡಿದ್ದೇವೆ ಎಂದು ಹೇಳಿಕೊಂಡಿರುವ ಝಾ ಮತ್ತು ಇತರೆ ಆರೋಪಿಗಳಿಗೆ ಸಾಮಾಜಿಕ ಜಾಲತಾಣ ಫೇಸ್​ಬುಕ್ ಮೂಲಕ ಪರಸ್ಪರ ಪರಿಚಯವಾಗಿದೆ. ಇವರು ಕಳೆದ ನಾಲ್ಕು ವರ್ಷಗಳಿಂದ ಸಂಪರ್ಕದಲ್ಲಿದ್ದರು. ಎಲ್ಲಾ ಆರೋಪಿಗಳು ಫೇಸ್​ಬುಕ್​ನಲ್ಲಿ ಜಸ್ಟಿಸ್ ಫಾರ್ ಆಜಾದ್ ಭಗತ್ ಸಿಂಗ್ ಪುಟದ ಸದಸ್ಯರಾಗಿದ್ದರು. ಎಲ್ಲಾ ಆರು ಮಂದಿ ಸಂಸತ್ ಪ್ರವೇಶಿಸಲು ಬಯಸಿದ್ದರು. ಆದರೆ ಇಬ್ಬರಿಗೆ ಮಾತ್ರ ಪಾಸ್ ಸಿಕ್ಕಿತ್ತು. ಅಮೋಲ್ ಮತ್ತು ನೀಲಂ ಸಂಸತ್ತಿನ ಆವರಣದ ಹೊರಗೆ ಡಬ್ಬಿಗಳಿಂದ ಹೊಗೆ ಬಿಡುತ್ತಿದ್ದ ದೃಶ್ಯವನ್ನು ಲಲಿತ್ ವಿಡಿಯೋ ಮಾಡಿದ್ದಾನೆ. ಅದನ್ನು ಆತ ತನ್ನ ಇನ್​ಸ್ಟಾಗ್ರಾಮ್ ಪೇಜ್​ನಲ್ಲಿ ಅಪ್​ಲೋಡ್ ಮಾಡಿದ್ದಾನೆ.

ಕಠಿಣ ಯುಎಪಿಎ ಕೇಸ್: ಭದ್ರತೆ ಭೇದಿಸಿದ ಘಟನೆಗೆ ಸಂಬಂಧಿಸಿ ದೆಹಲಿ ಪೊಲೀಸರು ಯುಎಪಿಎ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಂಸತ್ ಬಳಿ ಇರುವ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಯುಎಪಿಎ ಸೆಕ್ಷನ್ 16 (ಭಯೋತ್ಪಾದಕ ಕೃತ್ಯಕ್ಕೆ ಶಿಕ್ಷೆ) 18 (ಪಿತೂರಿಗಾಗಿ ಶಿಕ್ಷೆ) ಮತ್ತು ಐಪಿಸಿ ಸೆಕ್ಷನ್ 120 ಬಿ (ಅಪರಾಧ ಪಿತೂರಿ), 452 (ಅತಿಕ್ರಮಣ), 153 (ದಂಗೆಯನ್ನು ಪ್ರಚೋದಿಸುವ ಉದ್ದೇಶ), 186 (ಸಾರ್ವಜನಿಕ ಕಾರ್ಯ ನಿರ್ವಹಿಸುವಲ್ಲಿ ಅಡ್ಡಿಪಡಿಸುವುದು) ಮತ್ತು 353 (ಜನಪ್ರತಿನಿಧಿ ಕರ್ತವ್ಯ ನಿರ್ವಹಿಸದಂತೆ ತಡೆಯಲು ಆಕ್ರಮಣ ಅಥವಾ ಕ್ರಿಮಿನಲ್ ಬಲ ಪ್ರಯೋಗ) ಅಡಿಯಲ್ಲಿ ದೂರುಗಳು ದಾಖಲಾಗಿವೆ. ಈ ನಡುವೆ ಭದ್ರತಾ ಲೋಪಕ್ಕಾಗಿ ಎಂಟು ಸಿಬ್ಬಂದಿಯನ್ನು ಲೋಕಸಭೆ ಸಚಿವಾಲಯ ಅಮಾನತುಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net