

Goods Train: ರೈಲ್ವೆ ಹಳಿಗಳ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾಗ ಸರಕು ರೈಲು ಹರಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದ ಘಟನೆ ಛತ್ತೀಸ್‌ಗಢದ ಬಲೋಡ್ ಜಿಲ್ಲೆಯಲ್ಲಿ ಮಂಗಳವಾರ (ಜೂ.10) ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಲ್ಲಿರಾಜ್ರಾ ಮತ್ತು ಕುಸುಮ್ಕಾಸಾ ನಿಲ್ದಾಣಗಳ ನಡುವೆ ಬೆಳಗಿನ ಜಾವ ಈ ಘಟನೆ ನಡೆದಿದೆ. ಮೃತಪಟ್ಟ ಇಬ್ಬರು ವ್ಯಕ್ತಿಗಳು ಸೇರಿದಂತೆ ಸುಮಾರು 11 ಕಾರ್ಮಿಕರು ರೈಲ್ವೆ ಹಳಿಗಳ ಮೇಲೆ ಕಾಲ್ನಡಿಗೆಯಲ್ಲಿ ಕುಸುಮ್ಕಾಸಾ ಕಡೆಗೆ ಹೋಗುತ್ತಿದ್ದರು. ಅವರಲ್ಲಿ ಐವರು ವಿಶ್ರಾಂತಿ ಪಡೆಯಲು ಹಳಿಗಳ ಮೇಲೆ ಕುಳಿತಿದ್ದರು ಅದೇ ಸಮಯದಲ್ಲಿ ಸರಕು ರೈಲು ಬಂದಿದ್ದು, ಈ ದುರಂತ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಅವರಲ್ಲಿ ಒಬ್ಬರು ರೈಲು ಬರುತ್ತಿರುವುದನ್ನು ಗಮನಿಸಿ, ಕೂಗಿದಾಗ ಉಳಿದವರು ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ಆದರೆ ಅವರಲ್ಲಿ ನಾಲ್ವರಿಗೆ ರೈಲು ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ದಿಲ್ಲು ರೈ (19) ಮತ್ತು ಕೃಷ್ಣ (20) ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಅಜಯ್ ರೈ ಮತ್ತು ವಿಕಾಸ್ ಅಮ್ರಾನ್ ಎಂದು ಗುರುತಿಸಲಾಗಿದೆ, ಇವರೆಲ್ಲರೂ ಕಾರ್ಮಿಕರಾಗಿದ್ದು, ಜಾರ್ಖಂಡ್ ಮೂಲದವರು ಎಂದು ಅಧಿಕಾರಿ ತಿಳಿಸಿದ್ದಾರೆ.
ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್)