ದ್ವಿಚಕ್ರ ವಾಹನ ಕಳ್ಳನ ಬಂಧನ

Arrest Kaidhi
Published on

ಬೆಂಗಳೂರು: ಹ್ಯಾಂಡಲ್ ಲಾಕ್ ಮುರಿದು ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಮೂಲದ ಭರತ್ ಕುಮಾರ್(೨೯) ಬಂಧಿತ. ಆರೋಪಿಯಿಂದ ೫.೧೦ ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ ೧೧ ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಕಾಮಾಕ್ಷಿಪಾಳ್ಯದ ರಾಮು ಎಂಬುವವರ ದ್ವಿಚಕ್ರ ವಾಹನ ಕಳ್ಳತನವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ನಗರದ ವಿವಿಧೆಡೆ ಸುತ್ತಾಡಿ ಮನೆ ಎದುರು, ಪಾರ್ಕಿಂಗ್ ಸ್ಥಳಗಳು, ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನಗಳನ್ನು ಗುರಿಯಾಗಿಸಿ ರಾತ್ರಿ ವೇಳೆ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದ. ಬಳಿಕ ಕದ್ದ ದ್ವಿಚಕ್ರ ವಾಹನಗಳನ್ನು ಪರಿಚಿತ ಮೂಲಕ ವಿಲೇವಾರಿ ಮಾಡಿಸಿ ಹಣ ಪಡೆದು ಮೋಜು-ಮಸ್ತಿ ಮಾಡುತ್ತಿದ್ದ. ಇತ್ತೀಚೆಗೆ ಆರೋಪಿಯು ಪ್ರಕರಣವೊಂದರಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ. ತನಿಖೆ ವೇಳೆ ಆರೋಪಿಯನ್ನು ಬಾಡಿ ವಾರೆಂಟ್ ಪಡೆದು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ದ್ವಿಚಕ್ರ ವಾಹನ ಕಳವು ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಆರೋಪಿ ಬಂಧನದಿಂದ ೧೧ ಬೈಕ್ ಕಳವು ಪ್ರಕರಣ ಪತ್ತೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net