ಒಂದೇ ಅರ್ಜಿಗೆ ಎರಡು ರೀತಿ ಮಾಹಿತಿ ...!

sudeendra
ಸುಧೀಂದ್ರ
Published on

* ಕಿರುವಾರ ಎಸ್​. ಸುದರ್ಶನ್​ ಕೋಲಾರ

ಮಾಹಿತಿ ಹಕ್ಕು ಅಧಿನಿಯಮ (ಆರ್​ಟಿಐ)ದಡಿ ಸಲ್ಲಿಕೆಯಾಗಿದ್ದ ಒಂದೇ ಅರ್ಜಿಗೆ ಎರಡು ರೀತಿಯಲ್ಲಿ ಮಾಹಿತಿ ನೀಡಿದ ಶ್ರೀನಿವಾಸಪುರ ತಾಲೂಕು ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಹಸೀಲ್ದಾರ್​ ಸುಧೀಂದ್ರ ಕುಮಾರ್​ಗೆ ದಂಡ ವಿಧಿಸಲಾಗಿದೆ.

ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿ ಪಣಸಮಾಕನಹಳ್ಳಿಯ ಸರ್ವೇ ನಂ.83 ಮತ್ತು 84ರ ಪೈಕಿ ಜಮೀನು ಖಾತೆ ಬದಲಾವಣೆ ಕುರಿತು ಸಾಮಾಜಿಕ ಕಾರ್ಯಕರ್ತರ ವೆಂಕಟೇಶ್​ ಅರ್ಜಿ ಸಲ್ಲಿಸಿದ್ದರು.

ಅಂತೆಯೇ, ಕೋರ್ಟ್​ ಆದೇಶ ಸಂಖ್ಯೆ 145/2022-23ರ ಕಡತದ ಎಲ್ಲ ಪುಟಗಳ ನಕಲುಗಳನ್ನು ದೃಢೀಕರಿಸಿ ನೀಡುವಂತೆ 2022ರ ಅಕ್ಟೋಬರ್​ 5ರಂದು ಮಾಹಿತಿ ಕೋರಿದ್ದರು.

ಸಲ್ಲಿಸಿರುವ ಅರ್ಜಿಗೆ 30 ದಿನದಲ್ಲಿ ಮಾಹಿತಿ ಒದಗಿಸಬೇಕಾಗಿತ್ತು. ಆದರೆ, ಸಕಾಲಕ್ಕೆ ಮಾಹಿತಿ ಒದಗಿಸದ ಕಾರಣ ಅರ್ಜಿದಾರ ಮೇಲ್ಮನವಿ ಸಲ್ಲಿಸಿದ್ದಾರೆ. ಈ ವೇಳೆ, ತಾಲೂಕು ಕಚೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿಯೂ ಆದ ತಹಸೀಲ್ದಾರ್​ ಸುಧೀಂದ್ರ ಅವರು ಒಂದೇ ಅರ್ಜಿಗೆ ಎರಡೂ ರೀತಿ ಮಾಹಿತಿ ಒದಗಿಸಿದ್ದಾರೆ. ಈ ಎರಡೂ ಮಾಹಿತಿಗಳನ್ನು ಆಧರಿಸಿ ಅರ್ಜಿದಾರ ನೇರ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಸಂಬಂಧ ಮೇಲ್ಮನವಿ ವಿಚಾರಣೆ ನಡೆಸಿರುವ ಮಾಹಿತಿ ಹಕ್ಕು ಆಯೋಗದ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ದಂಡ ವಿಧಿಸಿ ಆದೇಶಿಸಿದ್ದಾರೆ.

* ಕೇಳಿದ ಮಾಹಿತಿ ಏನು?

- ಪಣಸಮಾಕನಹಳ್ಳಿಯ ಸರ್ವೇ 83 ಮತ್ತು 84ರ ಜಮೀನು ಖಾತೆ ಬದಲಾವಣೆ ಕುರಿತು ಮಾಹಿತಿ.

- ಕೋರ್ಟ್​ ಆದೇಶ ಸಂಖ್ಯೆ 145/2022&23ರ ಕಡತದಲ್ಲಿನ ಎಲ್ಲ ಪುಟಗಳ ನಕಲು ದೃಢೀಕರಿಸಿ ನೀಡುವುದು.

* ಎರಡು ಮಾಹಿತಿ...!!!

ಮಾಹಿತಿ-1

ಅರ್ಜಿದಾರ ಸಲ್ಲಿಸಿರುವ ಅರ್ಜಿಗೆ ಸಂಬಂಧ 2025ರ ಜುಲೈ 21ರಂದು ಕುಂಟೆ ಜಮೀನಾಗಿದ್ದು, ಸದರಿ ಜಮೀನನ್ನು ಯಾರಿಗೂ ಮಂಜೂರು ಮಾಡಿರುವುದಿಲ್ಲ. ಆದ್ದರಿಂದ ನಕಲು ನೀಡಲು ಸಹ ಇರುವುದಿಲ್ಲ ಎಂದು ತಿಳಿವಳಿಕೆ ಪತ್ರ ಅರ್ಜಿದಾರ ಹಾಗೂ ಆಯೋಗಕ್ಕೆ ಸಲ್ಲಿಸಲಾಗಿದೆ.

ಮಾಹಿತಿ-2

2025ರ ಅಕ್ಟೋಬರ್​ 1ರಂದು ಪಣಸಮಾಕನಹಳ್ಳಿ ಸರ್ವೇ ನಂ 83 ಮತ್ತು 84ರ ಖಾತೆ ಬದಲಾವಣೆಯಾಗಿದ್ದು, ಕೋರ್ಟ್​ ಆದೇಶ ಸಂಖ್ಯೆ 145/2022&23ರ ಕಡತದ ಎಲ್ಲ ನಕಲುಗಳನ್ನು ಸಿದ್ಧಪಡಿಸಿ, ಪತ್ರಕ್ಕೆ ಲಗತ್ತಿಸಿ ಕಳುಹಿಸಲಾಗಿದೆ.

* ಕ್ರಮಕ್ಕೆ ನಿರ್ದೇಶನ

ಮೇಲ್ಮನವಿದಾರನಿಗೆ 2 ರೀತಿ ಮಾಹಿತಿ ಒದಗಿಸಿರುವುದು ಕಂಡುಬಂದಿದ್ದು, ಇದು ಅನುಮಾನಾಸ್ಪದಕ್ಕೆ ದಾರಿ ಮಾಡಿಕೊಟ್ಟಿದೆ. ಸರಿಯಾದ ಮಾಹಿತಿ ಒದಗಿಸಲು ಕ್ರಮಕೈಗೊಂಡು ಹಾಗೂ ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ಕಾನೂನಿನಡಿ ಶಿಸ್ತು ಕ್ರಮ ಕೈಗೊಂಡು 10 ದಿನದಲ್ಲಿ ಅನುಪಾಲನ ವರದಿ ಸಲ್ಲಿಸಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ ಕಠಾರಿಯ ಹಾಗೂ ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರಿಗೆ ರಾಜ್ಯ ಮಾಹಿತಿ ಆಯುಕ್ತ ರುದ್ರಣ್ಣ ಹರ್ತಿಕೋಟೆ ನಿರ್ದೇಶಿಸಿದ್ದಾರೆ. ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 19(9)(ಬಿ)ರ ಅಡಿ ಅಧಿಕಾರ ಚಲಾಯಿಸಿ 10 ಸಾವಿರ ರೂ. ಪರಿಹಾರ ನೀಡಿ ಆದೇಶಿಸಿ, ಮೊತ್ತವನ್ನು 15 ದಿನಗಳೊಳಗಾಗಿ ಮೇಲ್ಮನವಿದಾರನಿಗೆ ತಹಸೀಲ್ದಾರ್​ ಸುಧೀಂದ್ರ ಪಾವತಿ ಮಾಡಬೇಕು ಎಂದು ಉಲ್ಲೇಖಿಸಲಾಗಿದೆ.

* ದಂಡ ವಿಧಿಸಿ ಆದೇಶ

ಅರ್ಜಿದಾರನಿಗೆ ಸರಿಯಾದ ಮಾಹಿತಿ ಒದಗಿಸದೆ ಎರಡು ರೀತಿ ಮಾಹಿತಿ ಒದಗಿಸಿರುವುದನ್ನು ಗಂಭಿರವಾಗಿ ಪರಿಗಣಿಸಿರುವ ರಾಜ್ಯ ಮಾಹಿತಿ ಆಯುಕ್ತರು, ಮಾಹಿತಿ ಹಕ್ಕು ಅಧಿನಿಯಮ 2005ರ ಕಲಂ 20(1) ಅಡಿ, ಪ್ರತಿವಾದಿಯಾಗಿರುವ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ತಹಸೀಲ್ದಾರ್​ ಸುಧೀಂದ್ರ ಅವರಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತವನ್ನು ವೇತನದಿಂದ ಕಡಿತಗೊಳಿಸಿ ಸರ್ಕಾರದ ಲೆಕ್ಕ ಶೀರ್ಷಿಕೆ ಖಾತೆಗೆ ಜಮಾ ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿ ಡಾ.ಎಂ.ಆರ್​.ರವಿ ಅವರಿಗೆ ನಿರ್ದೇಶಿಸಿದ್ದಾರೆ.

ಕೋಟ್​...

ಸಲ್ಲಿಕೆಯಾಗುವ ಅರ್ಜಿಗಳಿಗೆ ಸಮರ್ಪಕವಾಗಿ ಮಾಹಿತಿ ಒದಗಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಆದರೂ ಕೆಲ ತಹಸೀಲ್ದಾರ್​ಗಳು ಬೇಜವಾಬ್ದಾರಿ ತೋರಿದ್ದು, ಇದು ಎಚ್ಚರಿಕೆಯ ಪಾಠ ಆಗಿದೆ.

- ಡಾ.ಎಂ.ಆರ್​.ರವಿ, ಜಿಲ್ಲಾಧಿಕಾರಿ, ಕೋಲಾರ

ಕೋಟ್​...

ಅರ್ಜಿದಾರ ಕೇಳಿರುವ ಮಾಹಿತಿಯನ್ನು ಸಾರ್ವಜನಿಕ ಅಧಿಕಾರಿ ಸರಿಯಾಗಿ ನೀಡದೆ ದಿಕ್ಕು ತಪ್ಪಿಸುವ ಪ್ರಯತ್ನ ಮಾಡಿದ್ದಾರೆ. ಜತೆಗೆ ರ್ನಿಲ್ಯ ತೋರಿರುವುದು ಕಂಡು ಬಂದಿದೆ. ಆಯೋಗದ ಉದ್ದೇಶವು ಸಫಲವಾಗಬೇಕಾಗಿರುವುದರಿಂದ ಶಿಸ್ತು ಕ್ರಮಕ್ಕಾಗಿ ಆದೇಶ ಮಾಡಲಾಗಿದೆ.

- ರುದ್ರಣ್ಣ ಹರ್ತಿಕೋಟೆ, ರಾಜ್ಯ ಮಾಹಿತಿ ಆಯುಕ್ತ, ಬೆಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net