ಇಬ್ಬರು ಉಗ್ರರಿಗೆ ಏಳು ವರ್ಷಗಳ ಜೈಲು ಶಿಕ್ಷೆ

Terrorist (1)
Published on

ಬೆಂಗಳೂರು: ಬೆಂಗಳೂರು ಹಾಗೂ ಸುತ್ತಮುತ್ತ ಭಯೋತ್ಪಾದನಾ ಚಟುವಟಿಕೆ ನಡೆಸಿದ ಪ್ರಕರಣ ಸಂಬಂಧ ಎನ್‌ಐಎ ವಿಶೇಷ ನ್ಯಾಯಾಲಯ ಜಮಾತ್-ಉಲ್-ಮುಜಾಹಿದ್ದೀನ್ (ಜೆಎಂಬಿ) ಸಂಘಟನೆಯ ಇಬ್ಬರಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.


ಪಶ್ಚಿಮ ಬಂಗಾಳ ಮೂಲದ ಆಸ್ೀ ಇಕ್ಬಾಲ್ ಅಲಿಯಾಸ್ ನದೀಂ (೨೭) ಮತ್ತು ಮೊಹಮ್ಮದ್ ದಿಲ್ವಾರ್ ಹುಸೇನ್ ಅಲಿಯಾಸ್ ಉಮರ್ (೩೧) ಶಿಕ್ಷೆಗೆ ಗುರಿಯಾದವರು. ಆಸ್ೀ ಇಕ್ಬಾಲ್‌ಗೆ ಜೈಲು ಶಿಕ್ಷೆಯ ಜತೆಗೆ ೩೬ ಸಾವಿರ ರೂ. ಹಾಗೂ ಮೊಹಮ್ಮದ್ ದಿಲ್ವಾರ್ ಹುಸೇನ್‌ಗೆ ೩೩ ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.


ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು, ಜೆಎಂಬಿ ಸಂಘಟನೆಗೆ ಸೇರಿದ ೧೨ ಮಂದಿ ವಿರುದ್ಧ ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಆಸ್ೀ ಇಕ್ಬಾಲ್, ಪ್ರಕರಣದಲ್ಲಿ ಮೂರನೇ ಆರೋಪಿಯಾಗಿದ್ದ ಮತ್ತು ಮೊಹಮ್ಮದ್ ದಿಲ್ವಾರ್ ಹುಸೇನ್ ಎಂಟನೇ ಆರೋಪಿಯಾಗಿದ್ದ. ಪ್ರಕರಣ ಸಂಬಂಧ ಈವರೆಗೆ ೧೦ ಮಂದಿಗೆ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. ಉಳಿದ ಇಬ್ಬರು ಆರೋಪಿಗಳಲ್ಲಿ ಒಬ್ಬಾತ ತಲೆಮರೆಸಿಕೊಂಡಿದ್ದಾನೆ. ಮತ್ತೊಬ್ಬ ಆರೋಪಿ ಕೋಲ್ಕತ್ತಾ ಜೈಲಿನಲ್ಲಿದ್ದು, ಇತರೆ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದಾನೆ.


ಆರೋಪಿಗಳು ಪಶ್ಚಿಮ ಬಂಗಾಳ ಮೂಲದವರಾಗಿದ್ದು, ಜೆಎಂಬಿ ಉಗ್ರ ಸಂಘಟನೆಯಲ್ಲಿ ಸಕ್ರಿಯವಾಗಿದ್ದರು. ತಮ್ಮ ವಿರುದ್ಧ ಕೊಲೆ, ಭಯೋತ್ಫಾದನೆ ಕೇಸ್‌ಗಳು ದಾಖಲಾಗಿದ್ದರಿಂದ ೮ ವರ್ಷಗಳ ಹಿಂದೆ ರಾಜ್ಯಕ್ಕೆ ಬಂದು, ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ತಲೆಮರೆಸಿಕೊಂಡಿದ್ದರು. ಈ ವೇಳೆ ಚಿಂದಿ ಆಯುವ, ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಾಡುವ ಸೋಗಿನಲ್ಲಿ ಜೀವನ ನಡೆಸುತ್ತಿದ್ದರು. ಜತೆಗೆ ಹೊಸಕೋಟೆ, ದೊಡ್ಡಬಳ್ಳಾಪುರ ಭಾಗದಲ್ಲಿ ರಾತ್ರಿ ವೇಳೆ ಮನೆಗಳಿಗೆ ನುಗ್ಗಿ ದರೋಡೆ ಮಾಡಿ, ಬಂದ ಹಣವನ್ನು ಜೆಎಂಬಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸಲು ಸಂಘಟನೆ ಖಾತೆಗೆ ಜಮೆ ಮಾಡುತ್ತಿದ್ದರು. ಈ ಸಂಬಂಧ ಎನ್‌ಐಎ ಅಧಿಕಾರಿಗಳು ಕೆಲ ವರ್ಷಗಳ ಹಿಂದೆ ಈ ಇಬ್ಬರು ಆರೋಪಿಗಳು ಸೇರಿ ೧೧ ಮಂದಿಯನ್ನು ಬಂಧಿಸಿ, ಆರೋಪಪಟ್ಟಿ ಕೂಡ ಕೋರ್ಟ್‌ಗೆ ಸಲ್ಲಿಸಿದ್ದರು. ಇದೀಗ ಇಬ್ಬರು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ಇದುವರೆಗೂ ಕೋರ್ಟ್ ೧೦ ಮಂದಿಗೆ ಜೈಲು ಶಿಕ್ಷೆ ವಿಧಿಸಿದೆ ಎಂದು ಎನ್‌ಐಎ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net