ಇಂಗ್ಲೆಂಡ್​ನಲ್ಲಿ ಗಣೇಶ್ ಕಳಿಸಿ ಬರುವಾಗ 2 ಕಾರುಗಳ ನಡುವೆ ಡಿಕ್ಕಿ; ತೆಲಂಗಾಣದ ಇಬ್ಬರು ವಿದ್ಯಾರ್ಥಿಗಳು ಸಾವು| Accident

Accident 3
Published on

Accident: ಆಗ್ನೇಯ ಇಂಗ್ಲೆಂಡ್​ನಲ್ಲಿ ಭಾರತೀಯ ವಿದ್ಯಾರ್ಥಿಗಳು ಗಣಪತಿಯನ್ನು ಕೆರೆಗೆ ಬಿಟ್ಟು ವಾಪಸ್ ಬರುವಾಗ ಎರಡು ಕಾರುಗಳ ನಡುವೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು, ತೆಲಂಗಾಣದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದು, ಐವರಿಗೆ ಗಾಯಗಳಾಗಿವೆ ಎಂದು ಬುಧವಾರ (ಸೆ. 03) ವರದಿಯಾಗಿದೆ.

ಸೋಮವಾರ ಮುಂಜಾನೆ ರೇಲೀ ಸ್ಪರ್ ವೃತ್ತದಲ್ಲಿ ಒಂಬತ್ತು ತೆಲುಗು ವಿದ್ಯಾರ್ಥಿಗಳ ಗುಂಪು ಗಣೇಶ ವಿಸರ್ಜನೆಯ ಸಂಭ್ರಮದಿಂದ ಮರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ತೆಲಂಗಾಣದ ಚೈತನ್ಯ ತಾರೆ (23) ಸ್ಥಳದಲ್ಲೇ ಸಾವನ್ನಪ್ಪಿದರೆ, ರಿಷಿ ತೇಜ ರಾಪೋಲು (21) ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಸಾಯಿ ಗೌತಮ್ ರಾವುಲ, ನೂತನ್ ತಾಟಿಕಾಯಲ, ಯುವ ತೇಜ ರೆಡ್ಡಿ ಗುರ್ರಂ, ವಂಶಿ ಗೊಲ್ಲ ಮತ್ತು ವೆಂಕಟ ಸುಮಂತ್ ಪೆಂಟಿಯಾಲ ಗಂಭೀರ ಗಾಯಗಳೊಂದಿಗೆ ರಾಯಲ್ ಲಂಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಕುರಿತು ಎಸೆಕ್ಸ್ ಪೊಲೀಸರು ಮಾಹಿತಿ ನೀಡಿದ್ದು, ಎರಡು ಕಾರುಗಳ ಚಾಲಕರಾದ ಗೋಪಿಚಂದ್ ಬಟಮೇಕಲ ಮತ್ತು ಮನೋಹರ್ ಸಬ್ಬನಿ ಅವರನ್ನು ಅಪಘಾತಕ್ಕೆ ಕಾರಣವಾದ ಅಪಾಯಕಾರಿ ಚಾಲನೆಯ ಆರೋಪದ ಮೇಲೆ ಬಂಧಿಸಲಾಗಿದೆ, ಆದರೆ ನವೆಂಬರ್ 20 ರವರೆಗೆ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಜೊತೆಗೆ A130 ರಸ್ತೆಯ ಘಟನೆಗೆ ಸಂಬಂಧಿಸಿದ ಸಿಸಿಟಿವಿ ಅಥವಾ ಡ್ಯಾಶ್ ಕ್ಯಾಮ್ ದೃಶ್ಯಾವಳಿಗಳಿಗಾಗಿ ಸಾರ್ವಜನಿಕ ಮನವಿಯನ್ನು ಮಾಡಿದ್ದಾರೆ.

ಇನ್ನು ಮೃತ ವಿದ್ಯಾರ್ಥಿಗಳ ಕುಟುಂಬಸ್ಥರು ಪಾರ್ಥಿವ ಶರೀರವನ್ನು ಭಾರತಕ್ಕೆ ತರುವಂತೆ ತెಲಂಗಾಣ ಸರ್ಕಾರ ಮತ್ತು ಕೇಂದ್ರ ಸಚಿವರಿಗೆ ಮನವಿ ಮಾಡಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net