ಮನೆಯ ಮಹಡಿಯಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್​ ತಂತಿ ತಗುಲಿ ಬಾಲಕರಿಬ್ಬರ ಸಾವು: ತುಮಕೂರಲ್ಲಿ ದುರ್ಘಟನೆ

TMK Electrocution
Published on

ತುಮಕೂರು: ಮನೆಯ ಮಹಡಿ ಮೇಲೆ ಆಟವಾಡುತ್ತಿದ್ದಾಗ ವಿದ್ಯುತ್​ ತಂತಿ ತಗುಲಿ ಮಕ್ಕಳಿಬ್ಬರು ದುರಂತ ಸಾವಿಗೀಡಾಗಿರುವ ಹೃದಯವಿದ್ರಾವಕ ಘಟನೆ ತುಮಕೂರಿನ ಬೆಳಗುಂಬದ ಸಿದ್ದರಾಮೇಶ್ವರ ಬಡಾವಣೆಯಲ್ಲಿಂದು (ಏಪ್ರಿಲ್​ 20) ನಡೆದಿದೆ.

ಪ್ರಜ್ವಲ್ (14) ಹಾಗೂ ನೀತಿಶ್ (15) ಮೃತ ದುರ್ದೈವಿಗಳು. ಬೇಸಿಗೆ ರಜೆಯ ಮೂಡ್​ನಲ್ಲಿದ್ದ ಇಬ್ಬರು ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮೃತ ನಿತೀಶ್​ ತನ್ನ ಚಿಕ್ಕಪ್ಪನ ಮನೆಗೆ ಬಂದಿದ್ದ. ಇಂದು ಬೆಳಗ್ಗೆ 8:30 ರ ಸುಮಾರಿಗೆ ತನ್ನ ಸ್ನೇಹಿತ ಪ್ರಜ್ವಲ್ ಜೊತೆ ಆಟವಾಡುತ್ತಿದ್ದ. ಇಬ್ಬರು ಮನೆಯ ಮಹಡಿಯಲ್ಲಿ ಆಟವಾಡಿತ್ತಿದ್ದರು. ಮನೆಯ ಮುಂಭಾಗವೇ ಹಾದುಹೋಗಿರುವ ವಿದ್ಯುತ್ ತಂತಿ ತಗುಲಿ ಸಾವಿಗೀಡಾಗಿದ್ದಾರೆ.

ಮೃತ ನಿತೀಶ್​ ತುಮಕೂರು ತಾಲೂಕಿನ ಕುಂದೂರು ಗ್ರಾಮದ ವೀರಭದ್ರಯ್ಯ ಎಂಬುವವರ ಮಗ. ಪ್ರಜ್ವಲ್​ ಬೆಳಗುಂಬ ಗ್ರಾಮದ ಸಿದ್ದಲಿಂಗಯ್ಯ ಎಂಬುವವರ ಮಗ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಕೆಇಬಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯರು ಕೆಇಬಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಇಬಿ ಅಧಿಕಾರಿಗಳ ನಿರ್ಲಕ್ಷ್ಯವೇ ಇಬ್ಬರು ಯುವಕರ ಸಾವಿಗೆ ಕಾರಣ ಎಂದು ಸ್ಥಳೀಯರು ಗಂಭೀರ ಆರೋಪ ಮಾಡಿದ್ದಾರೆ. ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)‌

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net