

ಆಗ್ರಾ, ಉತ್ತರಪ್ರದೇಶ: ಇಬ್ಬರು ಸಹೋದರಿಯರು ಕೊಠಡಿಯೊಳಗಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಆಗ್ರಾದ ಬ್ರಹ್ಮಕುಮಾರಿ ಆಶ್ರಮದಲ್ಲಿ ವರದಿಯಾಗಿದೆ.
ಶುಕ್ರವಾರ (ನವೆಂಬರ್ 10) ರಾತ್ರಿ ಇಬ್ಬರು ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದ್ದು, ಈ ನಿರ್ಧಾರ ಕೈಗೊಳ್ಳುವ ಮುನ್ನ ಸಹೋದರಿಯರು ಆಶ್ರಮದ ವಾಟ್ಸಾಪ್ ಗ್ರೂಪ್‌ಗೆ ತಮ್ಮ ಸಾವಿಗೆ ಕಾರಣವೇನು ಎಂಬುದನ್ನು ಸಂದೇಶದ ಮುಖೇನ ಕಳುಹಿಸಿದ್ದಾರೆ. ಮಕ್ಕಳ ಸಾವಿನ ಸುದ್ದಿ ತಿಳಿದ ಕುಟುಂಬ ಸದಸ್ಯರು ತಡರಾತ್ರಿ ಆಶ್ರಮಕ್ಕೆ ಭೇಟಿ ನೀಡಿ, ದೂರು ದಾಖಲಿಸಿದ್ದಾರೆ.
ಕೋಣೆಯಲ್ಲಿದ್ದ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದುಕೊಂಡು ಸಾವಿಗೀಡಾದ ಯುವತಿಯರು ತಮ್ಮ ಸಾವಿಗೆ ಆಶ್ರಮದ ನಾಲ್ವರು ನೌಕರರೇ ಕಾರಣ ಎಂದು ಸಂದೇಶದಲ್ಲಿ ಆರೋಪಿಸಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಒತ್ತಾಯಿಸಿದ್ದಾರೆ. ಮೃತ ಸಹೋದರಿಯರನ್ನು ಏಕ್ತಾ (37) ಮತ್ತು ಶಿಖಾ (34) ಎಂದು ಗುರುತಿಸಲಾಗಿದ್ದು, ಜಗ್ನರ್ ಪಟ್ಟಣದ ನಿವಾಸಿಗಳು ಎಂದು ವರದಿ ಉಲ್ಲೇಖಿಸಿದೆ.
ಘಟನೆ ಬಗ್ಗೆ ಮಾಹಿತಿ ನೀಡಿದ ಯುವತಿಯರ ಸಹೋದರ ಸೋನು, "ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ಬ್ರಹ್ಮಕುಮಾರಿ ಆಶ್ರಮದಲ್ಲಿದ್ದ ಸಹೋದರಿಯಿಂದ ನನ್ನ ವಾಟ್ಸಾಪ್‌ಗೆ ಸೂಸೈಡ್ ನೋಟ್ ಬಂತು. ಕೂಡಲೇ ಆಶ್ರಮಕ್ಕೆ ಧಾವಿಸಿ ನೋಡಿದಾಗ ಕೊಠಡಿಯ ಸೀಲಿಂಗ್ ಫ್ಯಾನ್‌ನ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರು" ಎಂದರು.
"ಒಬ್ಬ ಸಹೋದರಿ ಮೂರು ಪುಟಗಳ ಪತ್ರವನ್ನು ಬರೆದಿದ್ದು, ಮತ್ತೊಬ್ಬ ಸಹೋದರಿ ಒಂದು ಪುಟದ ಆತ್ಮಹತ್ಯೆ ಪತ್ರವನ್ನು ಬರೆದು ಆಶ್ರಮದ ವಾಟ್ಸಾಪ್ ಗ್ರೂಪ್‌ಗೆ ರವಾನಿಸಿದ್ದಾರೆ" ಎಂದು ಹೇಳಿದರು.
ನಾಲ್ವರು ಉದ್ಯೋಗಿಗಳು ವಂಚನೆ ಮತ್ತು ಹಣವನ್ನು ಕಸಿದುಕೊಂಡಿದ್ದಾರೆ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಯುವತಿಯರು ಆರೋಪಿಸಿದ್ದು, ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಲು ಪೊಲೀಸರ ತಂಡಗಳನ್ನು ರಚಿಸಲಾಗಿದೆ ಎಂದು ಎಸಿಪಿ ಖೈರಗಢ್ ತಿಳಿಸಿದ್ದಾರೆ,(ಏಜೆನ್ಸೀಸ್).