ಎರಡು ಪ್ರತ್ಯೇಕ ಅಪಘಾತ, ಇಬ್ಬರ ಸಾವು

Accident
Published on

ಬೆಂಗಳೂರು: ರಾಜಧಾನಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, ಮತ್ತೊರ್ವ ಗಾಯಗೊಂಡಿದ್ದಾನೆ.

ಅಪರಿಚಿತ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ.
ಪ್ರಕಾಶನಗರದ ನಿವಾಸಿ ವಿಜಯ್(೨೯) ಮೃತ ಸವಾರ. ಭಾನುವಾರ ರಾತ್ರಿ ೯ ಗಂಟೆಯ ವೇಳೆ ರಾಜಾಜಿನಗರದ ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ.
ಖಾಸಗಿ ಕಂಪನಿ ಉದ್ಯೋಯಾಗಿದ್ದ ವಿಜಯ್ ರಾತ್ರಿ ದ್ವಿಚಕ್ರ ವಾಹನದಲ್ಲಿ ಸುಜಾತ ಕಡೆಯಿಂದ ನವರಂಗ್ ಕಡೆಗೆ ತೆರಳುತ್ತಿದ್ದರು. ಡಾ.ರಾಜ್‌ಕುಮಾರ್ ರಸ್ತೆಯ ಅಭಿಮಾನಿ ಹೋಟೆಲ್ ಬಳಿ ಹೋಗುವಾಗ ಹಿಂದಿನಿಂದ ವೇಗವಾಗಿ ಬಂದ ಅಪರಿಚಿತ ವಾಹನ ಏಕಾಏಕಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದ ವಿಜಯ್ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಳು ವಿಜಯ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ವಿಜಯ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಅಪಘಾತದ ಬಳಿಕ ವಾಹನ ನಿಲ್ಲಿಸದೆ ಅಪರಿಚಿತ ವಾಹನದ ಚಾಲಕ ಪರಾರಿಯಾಗಿದ್ದಾನೆ. ಈ ಸಂಬಂಧ ಘಟನಾ ಸ್ಥಳದ ಸುತ್ತಮುತ್ತಲ ಸಿಸಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ಅಪರಿಚಿತ ವಾಹನ ಹಾಗೂ ಅದರ ಚಾಲಕನ ಪತ್ತೆಗೆ ಪ್ರಯತ್ನಿಸಲಾಗುತ್ತಿದೆ. ಈ ಸಂಬಂಧ ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸವಾರ ಸಾವು:
ಮತ್ತೊಂದು ಪ್ರಕರಣದಲ್ಲಿ ಸ್ನೇಹಿತನನ್ನು ಡ್ರಾಪ್ ಮಾಡಲು ಹೋಗುವಾಗ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಸವಾರ ಮೃತಪಟ್ಟು, ಹಿಂಬದಿ ಸವಾರ ಗಾಯಗೊಂಡಿದ್ದಾನೆ.

ಮೈಲಸಂದ್ರ ನಿವಾಸಿ ಮಂಜುನಾಥ(೨೭) ಮೃತ ಸವಾರ. ಈತನ ಸ್ನೇಹಿತ ಹಿಂಬದಿ ಸವಾರ ಚಂದ್ರು ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭಾನುವಾರ ರಾತ್ರಿ ೯.೧೫ರ ಸುಮಾರಿಗೆ ಕೆಂಚೇನಹಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ.

ಮೃತ ಮಂಜುನಾಥ ಆನ್‌ಲೈನ್ ಶಾಪಿಂಗ್ ಕಂಪನಿಯಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ರಾತ್ರಿ ತಮ್ಮ ಸ್ನೇಹಿತ ಚಂದ್ರು ಜತೆಗೆ ಊಟ ಮಾಡಿಕೊಂಡು ಕೆಂಚೇನಹಳ್ಳಿಯ ಆತನ ಮನೆಗೆ ಡ್ರಾಪ್ ಮಾಡಲು ದ್ವಿಚಕ್ರ ವಾಹನದಲ್ಲಿ ಹೋಗುವಾಗ ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಸವಾರರಿಬ್ಬರೂ ಹೆಲ್ಮೆಟ್ ಧರಿಸಿರಲಿಲ್ಲ. ಅಪಘಾತದ ವೇಳೆ ಸವಾರ ಮಂಜುನಾಥನ ತಲೆಗೆ ಗಂಭೀರ ಪೆಟ್ಟು ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಬಳಿಕ ಸ್ಥಳೀಯರು ಗಾಯಾಳುಗಳಿಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ಮಂಜುನಾಥ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಹಿಂಬದಿ ಸವಾರ ಚಂದ್ರು ಸಣ್ಣ ಪುಟ್ಟ ಗಾಯಗಳಾಗಿ ಚಿಕಿತ್ಸೆ ಪಡೆದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅತಿಯಾದ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಕಂಡು ಬಂದಿದೆ. ಈ ಸಂಬಂಧ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net