

ರಾಮನಗರ: ಟ್ಯೂಷನ್ ಮುಗಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಮನೆಗೆ ಮರಳುತ್ತಿದ್ದ ಮಕ್ಕಳಿಬ್ಬರು ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ಐದು ಹಾಗೂ ಎಂಟು ವರ್ಷದ ಮಕ್ಕಳಿಬ್ಬರು ಅನ್ಯಾಯವಾಗಿ ಸಾವಿಗೀಡಾದ ಈ ಪ್ರಕರಣ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ರಾಮನಗರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ರೋಹಿತ್ (5), ಶಾಲಿನಿ (8) ಸಾವಿಗೀಡಾದ ಮಕ್ಕಳು. ಸುಚಿತ್, ಗೌತಮಿ, ಲೇಖನ ಎಂಬ ಮೂವರು ಮಕ್ಕಳಿಗೆ ಗಂಭೀರ ಗಾಯಗಳಾಗಿವೆ.
ಟ್ಯೂಷನ್ ಮುಗಿಸಿ ಮನೆಗೆ ಮರಳುತ್ತಿದ್ದ ಈ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ಸಾವು-ನೋವುಗಳು ಉಂಟಾಗಿವೆ. ಗಾಯಗೊಂಡ ಮಕ್ಕಳನ್ನು ರಾಮನಗರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಚಿಕಿತ್ಸೆ ಫಲಿಸದೆ ಸಾವಿಗೀಡಾದರು. ಉಳಿದ ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಮಕ್ಕಳಿಗೆ ಗುದ್ದಿದ ಬಳಿಕವೂ ಚಾಲಕ ಗೂಡ್ಸ್ ವಾಹನ ಸಮೇತ ಪರಾರಿಯಾಗಿದ್ದ. ಆದರೆ ಬಳಿಕ ಬೇರೆಡೆ ವಾಹನ ನಿಲ್ಲಿಸಿ ತಲೆಮರೆಸಿಕೊಂಡಿದ್ದಾನೆ. ಆಸ್ಪತ್ರೆಗೆ ಎಎಸ್ಪಿ ಸುರೇಶ್ ಭೇಟಿ ನೀಡಿದ್ದು, ಅಪಘಾತದ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ. ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.