ಲಖನೌ ಜನತೆಗೆ 500 ರೂ. ನೋಟುಗಳು ತಂದ ಪೇಚು! ಇಡೀ ರಾತ್ರಿ ಅವರು ನಿದ್ದೆಗೆಟ್ಟಿದ್ದು ಈ ಕಾರಣಕ್ಕೆ

note
Published on

ಲಖನೌ: ಇಲ್ಲಿನ ಪೇಪರ್​ ಮಿಲ್​ ಕಾಲನಿಯಲ್ಲಿ ರಸ್ತೆಯಲ್ಲಿ ಅನಾಥವಾಗಿ ಬಿದ್ದಿದ್ದ ಎರಡು 500 ರೂಪಾಯಿ ನೋಟುಗಳು ಬಡಾವಣೆಯ ನಿವಾಸಿಗಳ ನಿದ್ದೆಗೆಡೆಸಿದವು! ಕರೊನಾ ಸೋಂಕು ಹರಡಲು ಯಾರೋ ಅಪರಿಚಿತರು ಆ ನೋಟುಗಳನ್ನು ಉದ್ದೇಶಪೂರ್ವಕವಾಗಿ ಎಸೆದು ಹೋಗಿರಬಹುದು ಎಂಬ ಭೀತಿಯೇ ಇದಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಪೊಲೀಸ್​ ಸಹಾಯವಾಣಿಗೆ ಕರೆ ಮಾಡಿದ ಜನರು, ಆ ನೋಟುಗಳ ಬಗ್ಗೆ ಮಾಹಿತಿ ನೀಡಿದರು. ಇದಕ್ಕೆ ಸ್ಪಂದಿಸಿದ ಪೊಲೀಸರು ಸ್ಥಳಕ್ಕೆ ಬಂದು ಅವುಗಳನ್ನು ವಶಕ್ಕೆ ಪಡೆದುಕೊಂಡರು.

ಬೇರೆ ದಿನಗಳಲ್ಲಿ ಆದರೆ, ರಸ್ತೆಯಲ್ಲಿ ಬಿದ್ದಿರುವ ನೋಟುಗಳನ್ನು ಗಮನಿಸಿದ ಜನರು ಯಾರಿಗೂ ತಿಳಿಯದಂತೆ ತೆಗೆದುಕೊಂಡು ಹೋಗಿರುತ್ತಿದ್ದರು. ಆದರೆ, ದೇಶದೆಲ್ಲೆಡೆ ಕೋವಿಡ್​ 19 ಪಿಡುಗು ಹಬ್ಬಿರುವ ಕಾರಣ, ನೋಟುಗಳ ಮೂಲಕ ಕರೊನಾ ವೈರಸ್​ ಹರಡಲು ಹುನ್ನಾರ ನಡೆಸುತ್ತಿರುವ ಭೀತಿಯಿಂದಾಗಿ, ಜನರು ಆ ನೋಟುಗಳನ್ನು ಪೊಲೀಸರ ವಶಕ್ಕೆ ನೀಡಿದರು!

ಇದಕ್ಕೆ ಕಾರಣವೂ ಇಲ್ಲದಿಲ್ಲ. ಲಖನೌ ಸುತ್ತಮುತ್ತ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವುದು ಇದಕ್ಕೆ ಕಾರಣ. ಆ ವಿಡಿಯೋ ತುಣುಕಿನಲ್ಲಿ ಅಪರಿಚಿತನೊಬ್ಬ ಒಂದು ಮನೆಯ ಎದುರು 500 ರೂ. ನೋಟು ಎಸೆದು, ಡೋರ್​ಬೆಲ್​ ಮಾಡಿ ಹೋಗುತ್ತಾನೆ. ಆ ಮನೆಯ ಹುಡುಗ ಬಾಗಿಲು ತೆಗೆದು ನೋಡಿದಾಗ ಯಾರೂ ಕಾಣಿಸುವುದಿಲ್ಲ. ಆದರೆ, ಬಾಗಿಲಲ್ಲಿ 500 ರೂ. ನೋಟು ಬಿದ್ದಿರುವುದನ್ನು ಗಮನಿಸುತ್ತಾನೆ. ಬಾಗಿಲು ಹಾಕಿಕೊಂಡು ತನ್ನ ತಾಯಿಗೆ ನೋಟಿನ ವಿಷಯ ತಿಳಿಸುತ್ತಾನೆ. ಆಗ ಆಕೆ ಗಾಬರಿಗೊಳ್ಳುತ್ತಾಳೆ.

ಬಳಿಕ ಸ್ಯಾನಿಟೈಸರ್​ನೊಂದಿಗೆ ಹೊರಬರುವ ಬಾಲಕ, ಅದನ್ನು ನೋಟಿನ ಮೇಲೆ ಸಿಂಪಡಿಸುತ್ತಾನೆ. ನಂತರ ಅದನ್ನು ಪಕ್ಕದ ಮನೆಯವರ ಬಾಗಿಲಿಗೆ ದಬ್ಬಿ ಒಳ ಹೋಗುತ್ತಾನೆ. ನೋಟುಗಳ ಮೂಲಕ ಕರೊನಾ ಹಬ್ಬಿಸಲು ಯತ್ನಿಸಲಾಗುತ್ತಿದೆ ಎಂಬ ಭೀತಿಯಿಂದಾಗಿ ಆತ ಹಾಗೆ ನಡೆದುಕೊಳ್ಳುತ್ತಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net