

ಬೆಂಗಳೂರು: ಮನೆ ಮಾಲೀಕರಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ದರೋಡೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುಂಬೈ ಮೂಲದ ಜಾಫರ್ ಅಸ್ಗರ್ ಅಲಿ(೩೬) ಹಾಗೂ ಉತ್ತರ ಪ್ರದೇಶ ಮೂಲದ ಅರ್ಮನ್ ಮಲ್ಲಿಕ್(೪೦) ಬಂಧಿತರು. ಆರೋಪಿಗಳಿಂದ ೭೦ ಲಕ್ಷ ಮೌಲ್ಯದ ೧ ಕೆ.ಜಿ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಮಹಿಳೆ ಸೇರಿ ಮೂವರು ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ.
ಆರೋಪಿಗಳು ಕಳೆದ ಏ.೨೪ರಂದು ಸಹಕಾರನಗರದ ನಿವಾಸಿಯಾಗಿರುವ ವೈದ್ಯರೊಬ್ಬರ ಮನೆಗೆ ನುಗ್ಗಿದ್ದ ಆರೋಪಿಗಳು ಕಳ್ಳತನಕ್ಕೆ ಯತ್ನಿಸುತ್ತಿದ್ದರು. ಈ ವೇಳೆ ಕ್ಲಿನಿಕ್‌ನಿಂದ ಮನೆಗೆ ವಾಪಾಸ್ ಬಂದ ವೈದ್ಯರು ಕಳ್ಳರನ್ನು ಕಂಡು ಹೊರಗಡೆ ಡೋರ್ ಲಾಕ್ ಮಾಡಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳು ಪಿಸ್ತೂಲ್ ತೋರಿಸಿ ಬೆದರಿಸಿ ವೈದ್ಯರನ್ನು ಕೊಠಡಿಯೊಂದಕ್ಕೆ ಎಳೆದುಕೊಂಡು ಹೋಗಿ ಕೂಡಿ ಹಾಕಿ ಮನೆಯಲ್ಲಿದ್ದ ಸುಮಾರು ೪೦ ಲಕ್ಷ ರೂ. ಮೌಲ್ಯದ ಚಿನ್ನಾಭರಣ ದರೋಡೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ತಂಡದಿಂದ ಕಾರ್ಯಾಚರಣೆ:
ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಆದರೆ ಕಳ್ಳತನ ಪ್ರಕರಣದಲ್ಲಿ ವಿಶಾಖಪಟ್ಟಣ ಮತ್ತು ಛತ್ತೀಸ್‌ಘಡ ಪೊಲೀಸರಿಂದ ಆರೋಪಿಗಳು ಬಂಧಿತರಾಗಿ ಜೈಲಿನಲ್ಲಿದ್ದರು. ಆರೋಪಿಗಳನ್ನು ಬಾಡಿವಾರೆಂಟ್ ಮೇರೆಗೆ ವಶಕ್ಕೆ ಪಡೆದ ಪೊಲೀಸರು, ನಗರಕ್ಕೆ ಕರೆ ತಂದು ವಿಚಾರಣೆ ನಡೆಸಿದಾಗ ಈ ಆರೋಪಿಗಳು ನಗರದಲ್ಲಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಬಗ್ಗೆ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳ್ಳತನ ಕೃತ್ಯದಲ್ಲಿ ಸಕ್ರಿಯವಾಗಿದ್ದ ಗ್ಯಾಂಗ್:
ಆರೋಪಿಗಳು ಅಪರಾಧ ಕೃತ್ಯವೆಸಗಲು ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರದಲ್ಲಿ ತಮ್ಮ ಕೈಚಳಕ ತೋರಿಸಿದ್ದರು. ಬೀಗ ಹಾಕಿರುವ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು, ವ್ಯವಸ್ಥಿತವಾಗಿ ಸಂಚು ರೂಪಿಸಿ ಬಳಿಕ ಮುಸುಕು ವೇಷಧಾರಿಗಳಾಗಿ ಬಂದು ಮನೆಗಳಲ್ಲಿ ನಗದು ಚಿನ್ನಾಭರಣ ದೋಚುತ್ತಿದ್ದರು. ಅಲ್ಲದೆ, ಕಳ್ಳತನ ಮಾಡುವ ಸಂದರ್ಭದಲ್ಲಿ ಮನೆ ಮಾಲೀಕರು ಎದುರಾದರೆ ಅವರಿಗೆ ಪಿಸ್ತೂಲ್ ತೋರಿಸಿ ಬೆದರಿಸಿ ಕೃತ್ಯವೆಸಗುತ್ತಿದ್ದರು. ಆರೋಪಿಗಳ ಬಂಧನದಿಂದ ಕೊಡಿಗೇಹಳ್ಳಿಯಲ್ಲಿ ದಾಖಲಾಗಿದ್ದ ಎರಡು ಪ್ರಕರಣ, ಎಲೆಕ್ಟ್ರಾನಿಕ್ ಸಿಟಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಮೂರು ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.