

ತಿರುವನಂತಪುರಂ: ಕೇರಳದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಸೋಮವಾರ ಗರಿಷ್ಠ ಉಷ್ಣಾಂಶಕ್ಕೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವುದಾಗಿ ವರದಿಯಾಗಿದೆ.
90 ವರ್ಷದ ವೃದ್ಧೆ ಮತ್ತು 53 ವರ್ಷದ ಪುರುಷರೊಬ್ಬರು ಬಿಸಿಲಿನ ತಾಪದಿಂದ ಭಾನುವಾರ ಮೃತಪಟ್ಟಿದ್ದಾರೆ ಎಂದು ''ದಿ ಹಿಂದೂ'' ಪತ್ರಿಕೆ ವರದಿ ಮಾಡಿದೆ. ರಾಜ್ಯದಲ್ಲಿ ತಾಪಮಾನವು 41.9 ಡಿಗ್ರಿ ಸೆಲ್ಸಿಯಸ್ ಸಾಮಾನ್ಯಕ್ಕಿಂತ ಸುಮಾರು 5.5 ಡಿಗ್ರಿ ಸೆಲ್ಸಿಯಸ್‌ನಷ್ಟು ಅಧಿಕವಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿ ಶೇಖರ್ ಕುರಿಯಾಕೋಸ್ ತಿಳಿಸಿದ್ದಾರೆ.
ಬಿಸಿಲಿನ ತಾಪದಿಂದ ಈ ಸಾವು ಸಂಭವಿಸಿದೆಯೇ ಎಂದು ನಾವು ಇನ್ನೂ ಅಧಿಕೃತವಾಗಿ ಧೃಢೀಕರಿಸಿಲ್ಲ, ಮೃತದೇಹಗಳ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿ ತಿಳಿಸಿದ್ದಾರೆ.
ಹವಾಮಾನ ಬದಲಾವಣೆಯು ಬೇಸಿಗೆಯ ತಿಂಗಳುಗಳಲ್ಲಿ ಹೆಚ್ಚು ಆಗಾಗ್ಗೆ, ತೀವ್ರ ಮತ್ತು ದೀರ್ಘವಾದ ಶಾಖದ ಅಲೆಗಳಿಗೆ ಕೊಡುಗೆ ನೀಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಕೇರಳದಾದ್ಯಂತ ಬಿಸಿಲಿನ ತಾಪಮಾನವು ಸಾಮಾನ್ಯಕ್ಕಿಂತ ಏರಿಕೆಯಾಗಿದೆ. ಬಿಸಿಲಿನ ತಾಪಮಾನದಿಂದ ರಕ್ಷಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಅನುಸರಿಸುವಂತೆ ಅಧಿಕಾರಿಗಳು ಜನಸಾಮಾನ್ಯರಿಗೆ ಎಚ್ಚರಿಕೆ ನೀಡಿದ್ದಾರೆ.
ಈ ವರ್ಷದ ಏಪ್ರಿಲ್ ಮತ್ತು ಜೂನ್ ನಡುವೆ ಸಾಮಾನ್ಯಕ್ಕಿಂತ ಹೆಚ್ಚು ಬಿಸಿಗಾಳಿಯ ದಿನಗಳು ಇರಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಒಡಿಶಾದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಗರಿಷ್ಠ ಉಷ್ಣಾಂಶಕ್ಕೆ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಒಡಿಶಾದ ಸಾರ್ವಜನಿಕ ಆರೋಗ್ಯ ನಿರ್ದೇಶಕ ಡಾ ನಿರಂಜನ್ ಮಿಶ್ರಾ ಹೇಳಿದ್ದಾರೆ. ಒಡಿಶಾದಲ್ಲಿ, ಭಾನುವಾರ 44.9 ಡಿಗ್ರಿ ಸೆಲ್ಸಿಯಸ್ (113 ° F) ಸೆಲ್ಸಿಯಸ್‌ನಷ್ಟು ತಾಪಮಾನವು ಅಧಿಕವಾಗಿದೆ.