

ರಾಮನಗರ: ಬೆಂಗಳೂರಿನ ಪಾದರಾಯನಪುರದಲ್ಲಿ ಗಲಭೆ ಮಾಡಿದ್ದ ಸುಮಾರು 121 ಮಂದಿಯನ್ನು ಬಂಧಿಸಿ ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಆದರೆ ಈಗ ಆತಂಕಕಾರಿ ವಿಚಾರವೊಂದು ಹೊರಬಿದ್ದಿದೆ. ಅವರಲ್ಲಿ ಇಬ್ಬರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ. ಇಷ್ಟು ದಿನ ಗ್ರೀನ್ ಝೋನ್ನಲ್ಲಿದ್ದ ರಾಮನಗರಕ್ಕೆ ಈಗ ಕರೊನಾ ಕಂಟಕ ಎದುರಾಗಿದೆ.
ಪಾದರಾಯನಪುರದಲ್ಲಿ ಕರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸಿ, ಅವರನ್ನು ಕ್ವಾರಂಟೈನ್ಗೆ ಒಳಪಡಿಸಲು ಹೋದಾಗ ಅಲ್ಲಿನ ಜನರು ಗಲಭೆ ಎಬ್ಬಿಸಿದ್ದರು. ಅರೆಸ್ಟ್ ಮಾಡಿದವರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡುವ ಸರ್ಕಾರದ ನಿರ್ಧಾರಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿ ಹಲವರು ವಿರೋಧ ವ್ಯಕ್ತಪಡಿಸಿದ್ದರು.
ಈಗ ಮೊಹಮದ್ ಯಾಸಿನ್ ಹಾಗೂ ಮೊಹಮದ್ ಸಬಾಜ್ ಎಂಬುವರಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಇದೀಗ ಇವರಿಬ್ಬರನ್ನೂ ಬೆಂಗಳೂರಿನ ವಿಕ್ಟೋರಿಯಾಕ್ಕೆ ಶಿಫ್ಟ್ ಮಾಡಲಾಗುತ್ತಿದೆ. ಇನ್ನೂ ಮೂವರಿಗೆ ಸೋಂಕು ತಗುಲಿರುವ ಸಾಧ್ಯತೆ ಇದ್ದು ಅವರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂದು ಮೂಲಗಳು ತಿಳಿಸಿವೆ.