

ಶಿವಮೊಗ್ಗ: ಕವಿ ಹಾಗೂ ನಾಟಕಕಾರ ಸತ್ಯನಾರಾಯಣರಾವ್ ಅಣತಿ ರಚನೆಯ ಎರಡು ಕೃತಿಗಳ ಬಿಡುಗಡೆ ಕಾರ್ಯಕ್ರಮ ಮೇ 11ರ ಬೆಳಗ್ಗೆ 10.30ಕ್ಕೆ ಡಿವಿಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ರಂಗಕರ್ಮಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಣತಿ ಅವರ ಸಮಗ್ರಕಾವ್ಯ ಮೌನ ಮಿಗಿಲು ಮತ್ತು ಅವರ ಹೊಸನಾಟಕ ನೀಲಾಂಜನೆ ಮಣಿಮೇಖಲೈ ಬಿಡುಗಡೆ ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕ ಚನ್ನಪ್ಪ ಅಂಗಡಿ, ಕಾರ್ಕಳ ರಂಗಾಯಣದ ನಿರ್ದೇಶಕ ವೆಂಕಟರಮಣ ಐತಾಳ್, ಸಾಹಿತಿ ಭಾರತೀದೇವಿ, ಪ್ರಕಾಶಕ ಬಿ.ಎಸ್. ವಿದ್ಯಾರಣ್ಯ ಭಾಗವಹಿಸಲಿದ್ದಾರೆ ಎಂದರು.
ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸಲಿದ್ದು, ಅಣತಿ ರಚನೆಯ ಭಾವಗೀತೆಗಳನ್ನು ಕೆ.ಯುವರಾಜ್ ಹಾಡಲಿದ್ದಾರೆ. ಪ್ರೊ.ರಾಜೇಂದ್ರ ಚೆನ್ನಿ, ಮನು ಚಕ್ರವರ್ತಿ, ಸವಿತಾ ನಾಗಭೂಷಣ, ಅಕ್ಷತಾ ಹುಂಚದಕಟ್ಟೆ, ಅವಿನಾಶ್, ಡಾ.ಸಿರಾಜ್ ಅಹ್ಮದ್, ರಕ್ಷಿತ್, ಎಂ.ಎಸ್.ನಾಗರಾಜರಾವ್, ಕೆ.ಎಸ್. ಮಧುಸೂದನ್, ಡಿ.ಎಸ್. ಮಂಜುನಾಥ್ ಮುಂತಾದವರು ಉಪಸ್ಥಿತರಿರುತ್ತಾರೆ ಎಂದು ಹೇಳಿದರು.
ಸತ್ಯನಾರಾಯಣರಾವ್ ಅಣತಿ ಮಾತನಾಡಿ, ಹಲವು ವರ್ಷಗಳ ನಂತರ ನನ್ನ ಎರಡು ಕೃತಿಗಳು ಬಿಡುಗಡೆಯಾಗುತ್ತಿರುವುದು ಸಂತಸದ ವಿಷಯ. ಪ್ರಕಾಶಕ ಬಿ.ಎಸ್.ವಿದ್ಯಾರಣ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. ಮೌನಮಿಗಿಲು ಎಂಬುದು ನನ್ನ ಎಲ್ಲ ಕಾವ್ಯಗಳ ಸಮಗ್ರ ಕೃತಿಯಾಗಿದೆ. ನನ್ನ ಹಲವು ನಾಟಕಗಳನ್ನು ಶಿವಮೊಗ್ಗದ ರಂಗ ಕಲಾವಿದರು ಅಭಿನಯಿಸಿದ್ದಾರೆ ಎಂದರು.
ಅಣತಿ ಅವರ ಪುತ್ರ ವಿಜೇತ್ ಸುದ್ದಿಗೋಷ್ಠಿಯಲ್ಲಿದ್ದರು.