

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್(ಕಸಾಪ) ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಇಲ್ಲಿಯವರೆಗೆ ಮೂವರು ನಾಮಪತ್ರ ಸಲ್ಲಿಸಿದ್ದಾರೆ, ಮುಂದಿನ ದಿನಗಳಲ್ಲಿ ಮತ್ತೂ ಇಬ್ಬರು ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ. ಜನಪ್ರಿಯತೆ ಹೊಂದಿರುವ ಅಭ್ಯರ್ಥಿಗಳೊಂದಿಗೆ ಚುನಾವಣಾ ಕಣ ಇದೀಗ ರಂಗೇರಿದೆ.
ಈ ಮುನ್ನ ಕಸಾಪ ಗೌರವ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಸಾಹಿತಿ ಸಂಗಮೇಶ ಬಾದವಾಡಗಿ ನಿನ್ನೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆ ಒಡ್ಡಬಲ್ಲ ಡಾ. ಮಹೇಶ್ ಜೋಶಿ ಹಾಗೂ ವ.ಚ.ಚನ್ನೇಗೌಡ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಮತ್ತೂ ಪ್ರಬಲ ಸ್ಪರ್ಧಿಗಳು ಎನ್ನಲಾದ ಸಿ.ಕೆ.ರಾಮೇಗೌಡ ಏ.1 ರಂದು ಮತ್ತು ಡಾ. ಶೇಖರಗೌಡ ಮಾಲಿಪಾಟೀಲ ಏ.5 ರಂದು ನಾಮಪತ್ರ ಸಲ್ಲಿಸಲಿದ್ದಾರೆ.
ದೂರದರ್ಶನ ವಾಹಿನಿಯಲ್ಲಿ ಮಹಾನಿರ್ದೇಶಕ ಸ್ಥಾನದವರೆಗೆ ಸೇವೆ ಸಲ್ಲಿಸಿರುವ ಮಹೇಶ್ ಜೋಶಿ ಅವರು, ಮಧುರ ಮಧುರವೀ ಮಂಜುಳ ಗಾನ ಕಾರ್ಯಕ್ರಮದ ಮೂಲಕ ವಾಹಿನಿಯನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸಿದರು. ಈಗಾಗಲೇ ಮೂರು ವರ್ಷಗಳಿಂದ ಅವರ ಹೆಸರು ಕಸಾಪ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಮತ್ತೊಂದೆಡೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷರಾಗಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ವ.ಚ.ಚನ್ನೇಗೌಡ, ಕನ್ನಡದ ಅನೇಕ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.