

ಘಜಿಯಾಬಾದ್: ಮನುಷ್ಯನ ಕ್ರೌರ್ಯಕ್ಕೆ ಕೊನೆಯಿಲ್ಲ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ. ನಿತ್ಯವೂ ದಾರಿ ಮಧ್ಯೆ ಹತ್ತಾರು ಬೀದಿ ನಾಯಿಗಳು ಕಾಣಸಿಗುತ್ತವೆ. ಅವುಗಳು ತಮ್ಮ ಪಾಡಿಗೆ ಇದ್ದರೂ, ಕಾರಣವಿಲ್ಲದೆ ಬೀದಿ ನಾಯಿಗಳನ್ನು ಕೆಣಕುವುದರಲ್ಲಿ ಕೆಲವು ಮನುಷ್ಯರಿಗೆ ಏನೋ ಖುಷಿ. ಬೀದಿ ನಾಯಿಗಳ ಮೇಲೆ ಹಾನಿ ಮಾಡುವುದು, ಕಲ್ಲೆಸೆಯುವ ಮೂಲಕ ಕಾರಣವಿಲ್ಲದೆ ಕೆಲವರು ತೊಂದರೆ ಕೊಡುತ್ತಾರೆ. ಇವೆಲ್ಲವನ್ನು ಮೂಕ ಪ್ರಾಣಿಗಳಿಗೆ ಸಹಿಸಿಕೊಳ್ಳಬೇಕಾದುದು ಅನಿವಾರ್ಯ ಎಂಬಂತಾಗಿದೆ.
ಇದೀಗ ಉತ್ತರಪ್ರದೇಶದ ಗಾಜಿಯಾಬಾದ್‌ನ ಲೋನಿ ಪ್ರದೇಶದ ಸಮೀಪವಿರುವ ಟ್ರೋನಿಕಾ ನಗರದಲ್ಲಿ ಮೂರು ಜನ ಯುವಕರು ಸೇರಿಕೊಂಡು ನಾಯಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ್ದಾರೆ. ಈ ಯುವಕರು ನಾಯಿಯ ಕುತ್ತಿಗೆಗೆ ಸರಪಳಿಯನ್ನು ಕಟ್ಟಿ ಗೋಡೆಗೆ ನೇತು ಹಾಕಿದ್ದಾರೆ. ಕುತ್ತಿಗೆಗೆ ನೇಣು ಬಿಗಿದುಕೊಳ್ಳುವ ಮಾದರಿಯಲ್ಲಿ ನಾಯಿಯನ್ನು ಹತ್ಯೆ ಮಾಡಿದ್ದಾರೆ. ನಾಯಿಯನ್ನು ನೇತಾಡಿಸಿದ ಬಳಿಕ, ಯುವಕನೊಬ್ಬ ಸರಪಳಿಯನ್ನು ಕೆಳಗಿನಿಂದ ಎಳೆದಿದ್ದಾನೆ.
ಇದೀಗ ಯುವಕರು ಅಮಾನುಷ ಕೃತ್ಯ ಎಸಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಎಲ್ಲರೂ ಯುವಕರ ಅಪಚಾರಕ್ಕೆ ತಕ್ಕ ಶಾಸ್ತಿಯಾಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸರು ಯುವಕರನ್ನು ಪತ್ತೆಹಚ್ಚಿ, ತನಿಖೆ ನಡೆಸಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಈ ಘಟನೆ ಮೂರು ತಿಂಗಳ ಹಿಂದೆ ನಡೆದಿದೆ. ಆದರೆ ಈ ಕೃತ್ಯದ ವಿಡಿಯೋ ಇದೀಗ ವೈರಲ್ ಆಗುತ್ತಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)