ಮೈಸೂರಿನಲ್ಲಿ ಇಬ್ಬರನ್ನು ಬಲಿ ಪಡೆದ ರಸ್ತೆ ಅಪಘಾತ : ‘ಉದ್ದೇಶಪೂರ್ವಕವಲ್ಲದ ಹತ್ಯೆ’ ಪ್ರಕರಣ ದಾಖಲು

ULLAS
Published on

ಮೈಸೂರು: ಎರಡು ತಿಂಗಳ ಹಿಂದೆ ನಗರದ ಮಾನಸಗಂಗೋತ್ರಿಯ ಚದುರಂಗ ರಸ್ತೆಯ ಆಯಿಷ್ ಬಳಿಯಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸರು ಸೋಮವಾರ ‘ಉದ್ದೇಶಪೂರ್ವಕವ ಲ್ಲದ ಹತ್ಯೆ’ ಪ್ರಕರಣ ಎಂದು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದಾರೆ.

ಸಾಮಾನ್ಯವಾಗಿ ರಸ್ತೆ ಅಪಘಾತ ಪ್ರಕರಣಗಳಲ್ಲಿ ‘ಉದ್ದೇಶಪೂರ್ವಕವಲ್ಲದ ಹತ್ಯೆ’ ಪ್ರಕರಣ ದಾಖಲಿಸುವುದಿಲ್ಲ. ಆದರೆ, ಮದ್ಯಪಾನ ಮಾಡಿ ಅಜಾಗರೂಕತೆಯಿಂದ ವಾಹನ ಚಾಲನೆ ಮಾಡಿ ಇಬ್ಬರು ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ‘ಉದ್ದೇಶಪೂರ್ವಕವಲ್ಲದ ಹತ್ಯೆ’ ಪ್ರಕರಣ ದಾಖಲಿಸಲಾಗಿದೆ. ದೋಷಾರೋಪಣ ಪಟ್ಟಿ ಸಲ್ಲಿಸಿರುವ ವಿಚಾರ ವನ್ನು ಎಡಿಜಿಪಿ ಅಲೋಕ್ ಕುಮಾರ್ ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಗರದ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (ಆಯಿಷ್) ಬಳಿ ಏ.22 ರಂದು ರಾತ್ರಿ ಕಾರು, ಬೈಕ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಸರಣಿ ರಸ್ತೆ ಅಪಘಾತದಲ್ಲಿ ನಗರದ ಖಾಸಗಿ ಕಾಲೇಜಿನ ವಿದ್ಯಾರ್ಥಿ, ಸಿದ್ದಾರ್ಥನಗರ ಬಡಾವಣೆ ನಿವಾಸಿ ಉಲ್ಲಾಸ್ ಮತ್ತು ಕೇರಳ ಮೂಲದ ಶಿವಾನಿ ಮೃತಪಟ್ಟಿದ್ದರು. ಬೈಕ್ ಸವಾರ ಮಹದೇವಸ್ವಾಮಿ ಗಾಯಗೊಂಡಿದ್ದರು. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ, ಮೈಸೂರಿನ ಕುವೆಂಪುನಗರದ ನಿವಾಸಿ ಆಕಾಶ್ ಎಂಬಾತ ಪಾನಮತ್ತನಾಗಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ ಮಾಡಿದ ಹಿನ್ನೆಲೆಯಲ್ಲಿ ಎರಡು ಜೀವಗಳು ಬಲಿಯಾಯಿತು. ಈ ಕುರಿತು ವಿವಿ ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net