

ಶ್ರೀನಗರ: ಉಗ್ರರ ದಾಳಿಯಿಂದ ಇಬ್ಬರು ಬಿಎಸ್‌ಎಫ್ ಯೋಧರು ಹುತಾತ್ಮರಾದ ಬೆನ್ನಲ್ಲೇ ಇಬ್ಬರು ಉಗ್ರಗಾಮಿಗಳನ್ನು ಭಾರತೀಯ ಸೇನೆ ಬಲಿ ಪಡೆದು ಸೇಡು ತೀರಿಸಿಕೊಂಡಿದೆ.
ಜಮ್ಮು- ಕಾಶ್ಮೀರದ ಶ್ರೀನಗರ ಜಿಲ್ಲೆಯ ನವಕಡಾಲ್ ಪ್ರದೇಶದಲ್ಲಿ ಭಾರತೀಯ ರಕ್ಷಣಾ ಪಡೆ ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದ್ದು, ಹಿಜ್ಬುಲ್ ಮುಜಾಹಿದ್ದೀನ್‌ನ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಭಾರತೀಯ ಸೇನೆಯ ಇಬ್ಬರು ಯೋಧರಿಗೆ ಗಾಯವಾಗಿದೆ. ನವಕಡಾಲ್‌ನಲ್ಲಿ ಉಗ್ರರು ಅಡಗಿರುವ ಖಚಿತ ಮಾಹಿತಿಯ ಆಧಾರದ ಮೇಲೆ ಶೋಧ ಕಾರ್ಯ ನಡೆಸಲಾಗಿತ್ತು. ರಾತ್ರಿ 2 ಗಂಟೆಯ ಹೊತ್ತಿಗೆ ಗುಂಡಿನ ಕಾಳಗ ಆರಂಭವಾಗಿದೆ. ಸತತ ಐದು ಗಂಟೆಗಳ ಕಾಲ ಕಾರ್ಯಾಚರಣೆ ನಡೆದಿದೆ.
ಉಗ್ರರ ಬಳಿಯಿದ್ದ ಎರಡು ಸ್ವಯಂಚಾಲಿತ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದಕ್ಕೆ ಮುನ್ನ ಬುಧವಾರ ಶ್ರೀನಗರದ ಹೊರವಲಯದಲ್ಲಿ ಉಗ್ರರು ಗಡಿ ಭದ್ರತಾ ಪಡೆಯ ಯೋಧರ ಮೇಲೆ ದಾಳಿ ನಡೆಸಿದ್ದು ಇಬ್ಬರು ಯೋಧರು ಹುತಾತ್ಮರಾಗಿದ್ದರು. ಯೋಧರ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಉಗ್ರರು ಪರಾರಿಯಾಗಿದ್ದರು.