

ಬೆಂಗಳೂರು: ನ್ಯಾಯಾಲಯದ ಆದೇಶವಿದ್ದರೂ ಅಂಗಡಿಗೆ ಪರವಾನಗಿ ನೀಡಲು ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಸರ್ಕಾರಿ ನೌಕರರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಬನಶಂಕರಿಯ ಟಿಎಪಿಸಿ ಕಾರ್ಯದರ್ಶಿ ಉಮೇಶ್ ಮತ್ತು ಉತ್ತರಹಳ್ಳಿ ಆಹಾರ ನಿರೀಕ್ಷಕ ಶ್ರೀಧರ್ ಲೋಕಾಯುಕ್ತ ಬಲೆಗೆ ಬಿದ್ದವರು.
ರಫೀಕ್ ಎಂಬುವರು ನೀಡಿದ ದೂರಿನ ಮೇರೆಗೆ ಈ ಕಾರ್ಯಾಚರಣೆ ಕೈಗೊಳ್ಳಲಾಯಿತು. ಪರವಾನಗಿಗೆ ಅನುಮತಿ ನೀಡಲು ೩.೫೦ ಲಕ್ಷ ರೂ. ಲಂಚದ ಬೇಡಿಕೆ ಇಡಲಾಗಿತ್ತು. ಈ ಹಿಂದೆ ಒಂದು ಲಕ್ಷ ರೂ. ಲಂಚ ಪಡೆದಿದ್ದರು. ಇನ್ನಷ್ಟು ಲಂಚ ನೀಡುವಂತೆ ಕೇಳಿದ್ದರು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಲಂಚ ನೀಡಲು ಇಷ್ಟವಿಲ್ಲದ ಕಾರಣ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಲಾಗಿತ್ತು. ಆರೋಪಿ ಉಮೇಶ್ ಸೂಚನೆಯ ಮೇರೆಗೆ ಶ್ರೀಧರ್ ೧.೫೦ ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇಬ್ಬರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.