

ತಿರುವನಂತಪುರಂ: ಕಮ್ಯುನಿಷ್ಟರ ಪಕ್ಷದ ಆಡಳಿತವಿರುವ ಕೇರಳದಲ್ಲಿ ಇದೀಗ ಬಿಜೆಪಿ ಅಲೆ ಆರಂಭವಾಗಿದೆ. ರಾಜ್ಯದಲ್ಲಿ ಪ್ರತಿ ವಾರ ಒಂದಿಷ್ಟು ಮಂದಿ ಎಡ ಪಂಥದಿಂದ ಬಲ ಪಂಥಕ್ಕೆ ವಾಲಿ, ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ಇದೀಗ ಕೇರಳ ಹೈ ಕೋರ್ಟ್ನ ಇಬ್ಬರು ಮಾಜಿ ನ್ಯಾಯಮೂರ್ತಿಗಳು ಸೇರಿ ಒಟ್ಟು 18 ಮಂದಿ ಬಿಜೆಪಿ ಸೇರಿದ್ದಾರೆ.
ಎರ್ನಾಕುಲಂನ ತ್ರಿಪುಣಿತುರಾದಲ್ಲಿ ಭಾನುವಾರ ಬಿಜೆಪಿ ‘ವಿಜಯ ಯಾತ್ರೆ’ ನಡೆದಿದೆ. ಈ ಸಮಯದಲ್ಲಿ ಒಟ್ಟು 18 ಮಂದಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅದರಲ್ಲಿ ಕೇರಳ ಹೈ ಕೋರ್ಟ್ನ ಮಾಜಿ ನ್ಯಾಯಮೂರ್ತಿಗಳಾದ ಪಿ.ಎನ್.ರವೀಂದ್ರನ್ ಮತ್ತು ವಿ.ಸೀತಂಬರೇಶ್ ಕೂಡ ಸೇರಿದ್ದಾರೆ. ಸೀತಾಂಬರೇಶ್ ಅವರು ದೆಹಲಿಯಲ್ಲಿದ್ದು, ಅಲ್ಲಿಂದಲೇ ವಿಡಿಯೋ ಕಾಲ್ ಮುಖಾಂತರ ಬಿಜೆಪಿ ಸೇರಿಕೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಕ್ಟೋರಿಯಾ ಕಾಲೇಜಿನ ಪಾಲಕ್ಕಾಡ್ನಲ್ಲಿ ಓದುತ್ತಿದ್ದಾಗ ಅಖಿಲ್ ಭಾರತೀಯ ವಿದ್ಯಾ ಪರಿಷತ್ (ಎಬಿವಿಪಿ) ಕಾರ್ಯಕರ್ತರಾಗಿದ್ದ ಅನುಭವವನ್ನು ಹಂಚಿಕೊಂಡರು. ಈ ಇಬ್ಬರು ಮಾಜಿ ನ್ಯಾಯಮೂರ್ತಿಗಳು ಈ ಹಿಂದೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ ಅವರಿಗೆ ಲವ್ ಜಿಹಾದ್ ಕಾನೂನನ್ನು ಬೆಂಬಲಿಸಿ ಪತ್ರ ಬರೆದಿದ್ದರು.
ಈ ಇಬ್ಬರು ಗಣ್ಯರ ಜತೆಗೆ ಮಾಜಿ ಡಿಜಿಪಿ ವೇಣುಗೋಪಾಲ್ ನಾಯರ್, ಅಡ್ಮಿರಲ್ ಬಿಆರ್ ಮೆನನ್ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ನ ಮಾಜಿ ಜನರಲ್ ಮ್ಯಾನೇಜರ್ ಸೋಮಚುದನ್ ಅವರೂ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ