

ಶಿವಮೊಗ್ಗ: ಆಂಧ್ರಪ್ರದೇಶ ಸರ್ಕಾರ ಕುಮ್ಕಿ ಆನೆಗಳಿಗೆ ಬೇಡಿಕೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕದಿಂದ ಒಟ್ಟು ಆರು ಆನೆಗಳನ್ನು ಆಂಧ್ರ ಪ್ರದೇಶಕ್ಕೆ ಕಳಿಸಲು ಸರ್ಕಾರ ನಿರ್ಧರಿಸಿದೆ. ಈ ಪೈಕಿ ದುಬಾರೆ ಆನೆ ಬಿಡಾರದ ನಾಲ್ಕು ಹಾಗೂ ಸಕ್ರೆಬೈಲು ಆನೆ ಬಿಡಾರದ ಎರಡು ಆನೆಗಳು ಸೇರಿವೆ.
ಸಕ್ರೆಬೈಲ್‌ನಿಂದ ಮೇ 20ರಂದು ಎರಡು ಆನೆಗಳು ಬೆಂಗಳೂರಿಗೆ ಪ್ರಯಾಣ ಬೆಳೆಸಲಿವೆ. 21ರಂದು ವಿಧಾನಸೌಧದ ಎದುರು ಆರು ಆನೆಗಳನ್ನು ಆಂಧ್ರ ಸರ್ಕಾರಕ್ಕೆ ಒಪ್ಪಿಸಲಾಗುತ್ತದೆ. ಸಕ್ರೆಬೈಲ್‌ನಿಂದ ತೆರಳುವ ಆನೆಗಳೆಂದರೆ 16 ವರ್ಷದ ಕೃಷ್ಣ ಹಾಗೂ 15 ವರ್ಷದ ಅಭಿಮನ್ಯು.
ಇವೆರಡೂ ಕುಮ್ಕಿ ಆನೆಗಳಾಗಿ ಗಮನ ಸೆಳೆದಿವೆ. ತಾಯಿಯಿಂದ ಆನೆ ಮರಿಯನ್ನು ಬೇರ್ಪಡಿಸುವುದು, ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಇವೆರಡೂ ಪಳಗಿವೆ. ಇತ್ತೀಚೆಗೆ ಈ ಎರಡೂ ಆನೆಗಳು ದಾಂಡೇಲಿ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿರುವ ಪುಣಸೋಲಿ ಆನೆ ಬಿಡಾರದಲ್ಲಿ ಮರಿಯೊಂದನ್ನು ತಾಯಿಯಿಂದ ಬೇರ್ಪಡಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದವು.
ಈ ಹಿಂದೆ ಸಕ್ರೆಬೈಲು ಆನೆ ಬಿಡಾರದಿಂದ ಉತ್ತರಪ್ರದೇಶ ಹಾಗೂ ಮಧ್ಯಪ್ರದೇಶಗಳಿಗೂ ಆನೆಗಳನ್ನು ಕಳಿಸಲಾಗಿತ್ತು. ಬಿಡಾರ ಹಾಗೂ ಸುತ್ತಮುತ್ತಲಿನ ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿಯೂ ಈ ಪ್ರಕ್ರಿಯೆ ಅತ್ಯಂತ ಉಪಯುಕ್ತ ಎನಿಸಿದೆ. ಈಗ ಕೃಷ್ಣ ಹಾಗೂ ಅಭಿಮನ್ಯು ಜತೆಗೆ ಇಷ್ಟು ವರ್ಷದಿಂದ ಅವುಗಳ ಆರೈಕೆ ಮಾಡಿ ನಿಗಾದಲ್ಲಿ ಇರಿಸಿಕೊಂಡಿರುವ ಮಾವುತರನ್ನೂ ಕಳಿಸಲಾಗುತ್ತದೆ. ಈ ಮಾವುತರು ಆಂಧ್ರದ ಮಾವುತರಿಗೆ ಸರಿಯಾದ ತರಬೇತಿ ನೀಡಿ ಆನೆಗಳು ಅಲ್ಲಿಗೆ ಹೊಂದಿಕೆಯಾದ ಬಳಿಕ ಇಲ್ಲಿಗೆ ಮರಳಲಿದ್ದಾರೆ ಎಂದು ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ತಿಳಿಸಿದ್ದಾರೆ.