

ಶ್ರೀನಗರ: 28 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮಿನಿ ಬಸ್ ಜಮ್ಮು ಮತ್ತು ಕಾಶ್ಮೀರದ ಗುಡ್ಡಗಾಡು ದೋಡಾ ಜಿಲ್ಲೆಯ ಭಾಲೆಸ್ಸಾ ಸಮೀತ 200 ಅಡಿ ಆಳದ ಕಂದಕಕ್ಕೆ ಉರುಳಿದೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, 25 ಮಂದಿ ಗಾಯಗೊಂಡಿದ್ದಾರೆ.
ಖಾಸಗಿ ಮಿನಿ ಬಸ್ ಭಾಲೆಸ್ಸಾದಿಂದ ಥಾತ್ರಿಗೆ ತೆರಳುತ್ತಿದ್ದಾಗ ಬೆಳಗ್ಗೆ 10:30ರ ಸುಮಾರಿಗೆ ಭತ್ಯಾಸ್ ಬಳಿ ಈ ಅವಗಡ ಸಂಭವಿಸಿದೆ. “ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. 4 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, 5 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 9 ಜನರನ್ನು ಜಿಎಂಸಿ (ಸರ್ಕಾರಿ ವೈದ್ಯಕೀಯ ಕಾಲೇಜು) ದೋಡಾಗೆ ಶಿಫಾರಸು ಮಾಡಿದ್ದೇವೆ ಎಂದು ದೋಡಾ ಉಪ ಆಯುಕ್ತ ಹರ್ವಿಂದರ್ ಸಿಂಗ್ ಎಎನ್ಐಗೆ ತಿಳಿಸಿದ್ದಾರೆ.
ಹೇರ್ಪಿನ್ ತಿರುವುಗಳು ಹೆಚ್ಚಿರುವ ಈ ಭಾಗದಲ್ಲಿ ಚಾಲಕನಿಗೆ ಕಡಿದಾದ ರಸ್ತೆಯಲ್ಲಿ ಬಸ್ ತಿರುಗಿಸಲು ಸಾಧ್ಯವಾಗದೆ ಕಂದಕ್ಕೆ ಉರುಳಿದೆ. ಬಸ್ ಮಗುಚಿ ಬಿದ್ದಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿದೆ. ಭಾರತೀಯ ಸೇನೆ ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಅಪಘಾತವನ್ನು ತಪ್ಪಿಸಲು ಚಾಲಕ ಪ್ರಯತ್ನವನ್ನು ಮಾಡಿದನು. ಅವರ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ. ಆದರೆ, ಅಪಘಾತದಲ್ಲಿ ನಾವು 2 ಜೀವಗಳನ್ನು ಕಳೆದುಕೊಂಡಿದ್ದೇವೆ. 2 ಮಕ್ಕಳು ಸೇರಿದಂತೆ ಒಟ್ಟು 26 ಜನರು ಗಾಯಗೊಂಡಿದ್ದಾರೆ. ನಾವು ಗಂಭೀರ ರೋಗಿಗಳನ್ನು ಜಿಎಂಸಿ ದೋಡಾಗೆ ಕಳುಹಿಸಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು & ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ವಾಹನವೊಂದು ರಸ್ತೆಯಿಂದ ನಿಯಂತ್ರಣ ತಪ್ಪಿ ಆಳವಾದ ಕಂದಕಕ್ಕೆ ಉರುಳಿದ ಮರುದಿನ ಈ ಅವಘಢ ಸಂಭವಿಸಿದೆ.