ಶಿವಮೊಗ್ಗದಿಂದ ವಿಮಾನ ಹಾರಾಟಕ್ಕೆ ಇನ್ನು ಎರಡೇ ದಿನ

air port visit
ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ಅಂತಿಮ ಸಿದ್ಧತೆಗಳನ್ನು ಬಿ.ವೈ.ರಾಘವೇಂದ್ರ ಪರಿಶೀಲಿಸಿದರು. ಟಿ.ಡಿ.ಮೇಘರಾಜ್, ಶಿವರಾಜ್, ಕೆ.ವಿ.ಅಣ್ಣಪ್ಪ, ಎಸ್.ಶಿವಕುಮಾರ್, ಮಾಲತೇಶ್ ಮುಂತಾದವರಿದ್ದರು.
Published on

ಶಿವಮೊಗ್ಗ: ಬಹಳಷ್ಟು ಸಮಯದಿಂದ ಜನರು ಎದುರು ನೋಡುತ್ತಿದ್ದ ಶಿವಮೊಗ್ಗ ಏರ್‌ಪೋರ್ಟ್‌ನಿಂದ ವಿಮಾನಯಾನ ಆರಂಭಕ್ಕೆ ಎಲ್ಲ ರೀತಿಯ ಸಿದ್ಧತೆಗಳೂ ಪೂರ್ಣಗೊಂಡಿವೆ. ಆ.31ರಂದು ಮೊದಲ ವಿಮಾನ ಬೆಂಗಳೂರಿನಿಂದ ಬಂದು ಲ್ಯಾಂಡ್ ಆಗಲಿದೆ.

ಅಂದು ಬೆಳಗ್ಗೆ 9.50ಕ್ಕೆ ಬೆಂಗಳೂರಿನಿಂದ ಹೊರಡಲಿರುವ ಇಂಡಿಗೋ ವಿಮಾನದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಮತ್ತಿತರ ಪ್ರಯಾಣಿಕರನ್ನು ಶಿವಮೊಗ್ಗ ಏರ್‌ಪೋರ್ಟ್‌ಗೆ ಆಗಮಿಸಲಿದ್ದಾರೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.
ಸೋಮವಾರ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಅಂತಿಮ ಹಂತದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು ಮೊದಲ ವಿಮಾನವನ್ನು ಬರಮಾಡಿಕೊಳ್ಳಲಿದ್ದಾರೆ. ವಾಟರ್ ಸೆಲ್ಯೂಟ್ ಮೂಲಕ ವಿಮಾನವನ್ನು ಸ್ವಾಗತಿಸಲಾಗುವುದು. ಆ ವಿಮಾನ ಬೆಳಗ್ಗೆ 11.25ಕ್ಕೆ ಶಿವಮೊಗ್ಗದಿಂದ ಹೊರಟು 12.25ಕ್ಕೆ ಬೆಂಗಳೂರು ತಲುಪಲಿದೆ ಎಂದರು.
ಈ ವಿಮಾನ ನಿಲ್ದಾಣಕ್ಕೆ ಬಿಎಸ್‌ವೈ ಹೆಸರು ನಾಮಕರಣ ಮಾಡಬೇಕೆಂಬ ಒತ್ತಾಯ ಕೇಳಿ ಬಂದಾಗ, ಸ್ವತಃ ಯಡಿಯೂರಪ್ಪನವರೇ ಅದನ್ನು ವಿರೋಧಿಸಿ ಕುವೆಂಪು ಅವರ ಹೆಸರು ಸೂಚಿಸಿದ್ದರು. ಈಗ ಇಂಡಿಗೋ ಕಂಪನಿಯ ಟಿಕೆಟ್‌ಗಳಲ್ಲಿ ಕುವೆಂಪು ಏರ್‌ಪೋರ್ಟ್ ಎಂದೇ ಮುದ್ರಣ ಮಾಡಲಾಗುತ್ತಿದೆ ಎಂದು ಹೇಳಿದರು.
ಈ ವರ್ಷದ ಅಂತ್ಯಕ್ಕೆ ರಾತ್ರಿ ವೇಳೆಯಲ್ಲೂ ಶಿವಮೊಗ್ಗ ಏರ್‌ಪೋರ್ಟ್‌ನಲ್ಲಿ ವಿಮಾನಗಳು ಇಳಿಯುವ ವ್ಯವಸ್ಥೆ ಮಾಡಲಾಗುತ್ತದೆ. ಮುಂದಿನ 10 ವರ್ಷಗಳಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಏರ್‌ಪೋರ್ಟ್ ನಿರ್ದೇಶಕ ಶಮಂತ್, ಕೆಎಸ್‌ಐಎಸ್‌ಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಚಂದ್ರಶೇಖರ್, ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಸಿ.ಎಚ್.ಮಾಲತೇಶ್, ಹೃಷಿಕೇಶ್ ಪೈ, ಚಂದ್ರಶೇಖರ್, ಕೆ.ವಿ.ಅಣ್ಣಪ್ಪ ಮುಂತಾದವರು ಈ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net