

ಸರಗೂರು: ತಾಲೂಕಿನ ಹಾದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಗಲಪುರ ಗ್ರಾಮದಲ್ಲಿ ಗುರುವಾರ ಮಹದೇವಗೌಡನನ್ನು ಕೊಲ್ಲಲು ಯತ್ನಿಸಿ, ತೀವ್ರವಾಗಿ ಗಾಯಗೊಳಿಸಿದ ಹುಲಿಯನ್ನು ಎರಡು ದಿನಗಳಲ್ಲಿ ಸೆರೆ ಹಿಡಿಯಬೇಕು ಎಂದು ರೈತರು ಹಾಗೂ ಗ್ರಾಮಸ್ಥರು ಪಟ್ಟು ಹಿಡಿದರು.
ತಾಲೂಕಿನ ಬಡಗಲಪುರ ಗ್ರಾಮದ ಮಹದೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಹುಲಿ ಸೆರೆಗೆ ಅರಣ್ಯಾಧಿಕಾರಿಗಳಿಗೆ ಎರಡು ದಿನಗಳ ಗಡುವು ನೀಡಲಾಯಿತು.
ರಾಜ್ಯ ರೈತ ಸಂಘ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಬಡಕುಟುಂಬದ ಮಹದೇವಗೌಡ ಹುಲಿಯಿಂದ ಗಾಯಾಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಕುಟುಂಬಕ್ಕೆ ಆಧಾರವಾಗಿದ್ದ ಇವರು ಇದೀಗ ಆಸ್ಪತ್ರೆಯಲ್ಲಿ ಇದ್ದಾರೆ. ಕುಟಂಬ ಜೀವನ ನಡೆಸಲು ತುಂಬ ಕಷ್ಟಕರವಾಗಿದೆ. ಹಾಗಾಗಿ ಕುಟುಂಬದವರಿಗೆ ಕೆಲಸ ಹಾಗೂ ಪರಿಹಾರ ನೀಡಬೇಕು. ಈ ಭಾಗದಲ್ಲಿ 10 ರಿಂದ 15 ವರ್ಷಗಳಿಂದ ನುಗು ಅರಣ್ಯದಿಂದ ಸಮಸ್ಯೆ ಆಗುತ್ತಿದೆ. ಅದನ್ನು ಇನ್ನೂ ಬಗೆಹರಿಸಿಲ್ಲ. ಶೀಘ್ರದಲ್ಲೇ ಹೆಡಿಯಾಲ ಉಪ ವಲಯದ ನುಗು, ಹೆಡಿಯಾಲ, ಮೊಳೆಯೂರು, ಎನ್.ಬೇಗೂರು, ಓಂಕಾರ ವಲಯದ ಅಧಿಕಾರಿಗಳು ಎಲ್ಲ ಗ್ರಾಮಗಳಿಗೆ ಮಾಹಿತಿಯನ್ನು ನೀಡಿ ನವೆಂಬರ್ ತಿಂಗಳ ಮೊದಲ ವಾರದಲ್ಲೇ ಸಭೆ ಕರೆದು ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ನೀಡಬೇಕು. ಈ ಬಗ್ಗೆ ಪ್ರಚಾರವನ್ನು ನಿಮ್ಮ ಇಲಾಖೆಯಿಂದ ಮಾಡಬೇಕು ಎಂದು ತಿಳಿಸಿದರು.
ರೈತರ ಸಮಸ್ಯೆಗಳನ್ನು ಆಲಿಸಿದ ನಂತರ ಸಿಸಿಎಫ್ ಪ್ರಭಾಕರನ್ ಮಾತನಾಡಿ, ಬಡಗಲಪುರ ಗ್ರಾಮದಿಂದ ಹಾದನೂರು ಕ್ರಾಸ್‌ವರೆಗೆ ರೈಲು ಕಂಬಿಗಳು ಅಳವಡಿಸಲು ಸರ್ಕಾರದ ಮಟ್ಟದಲ್ಲಿ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಟೆಂಡರ್ ಪ್ರಕ್ರಿಯೆ ನಡೆಯುವ ಹಂತದಲ್ಲಿ ಇದೆ ಎಂದು ತಿಳಿಸಿದರು.
ಹುಲಿಯನ್ನು ಸೆರೆಹಿಡಿಯಲು ಮೂರು ತಂಡಗಳನ್ನು ರಚಿಸಲಾಗಿದೆ. ಸಾಕಾನೆಗಳ ಮೂಲಕ ಹುಲಿಯನ್ನು ಹಿಡಿಯುವ ನಾಲ್ಕು ವಲಯದ ಸಿಬ್ಬಂದಿ ನೇಮಕ ಮಾಡಲಾಗಿದ್ದು, ಒಂದು ವಾರದಲ್ಲಿ ಹುಲಿಯ ಚಲನವಲನ ನೋಡಿ ಸೆರೆ ಹಿಡಿಯುವ ಪ್ರಯತ್ನ ಮಾಡಿದ್ದೇವೆ. ಗ್ರಾಮಸ್ಥರಲ್ಲಿ ಒಂದು ಹುಲಿ ಹಿಡಿಯುವ ತನಕ ಜಮೀನು ಕಡೆಗೆ ಹೋಗಬೇಡಿ. ನಾವು ಹುಲಿ ಸೆರೆ ಹಿಡಿಯುವ ಸಮಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ತಹಸೀಲ್ದಾರ್ ಮೋಹನಕುಮಾರಿ, ಗ್ರಾಪಂ ಸದಸ್ಯರಾದ ಗಂಗಾಧರ, ರಾಮಚಂದ್ರ, ಪಿಎಸ್‌ಐ ಕಿರಣ್, ಅಮೃತಾ, ಮುನಿರಾಜು, ಮುಖಂಡರಾದ ನಿಂಗಣ್ಣ, ರವಿ, ಅಶೋಕ್‌ಕುಮಾರ್, ನಟರಾಜು, ಗಂಗಾಧರ ಇತರರಿದ್ದರು.