ಅನುಮಾನಾಸ್ಪದವಾಗಿ ಎರಡು ಹಸುಗಳು ಸಾವು

Published on

ಹನೂರು: ತಾಲೂಕಿನ ಅಜ್ಜೀಪುರ ಹಾಗೂ ಬಸಪ್ಪನದೊಡ್ಡಿ ಗ್ರಾಮದಲ್ಲಿ ಶನಿವಾರ ಅನುಮಾನಾಸ್ಪದವಾಗಿ ಎರಡು ಹಸುಗಳು ಮೃತಪಟ್ಟಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಅಜ್ಜೀಪುರದ ಅಂಬಿಕಾಪುರ ಭಾಗದಲ್ಲಿ ಕಳೆದ ವಾರದ ಹಿಂದೆ ನಾಲ್ಕೈದು ಹಸುಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದವು. ಈ ಬಗ್ಗೆ ರೈತರಲ್ಲಿ ಹಸುಗಳಿಗೆ ರೋಗ ತಗುಲಿರಬಹುದು ಎಂಬ ಆತಂಕ ಮನೆ ಮಾಡಿತ್ತು. ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜಾದ್‌ಖಾನ್ ಅವರು ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು ಅವರ ಗಮನಕ್ಕೆ ತಂದಿದ್ದು, ಹಸುಗಳ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದರು. ಈ ಬಗ್ಗೆ ಗ್ರಾಮಗಳಿಗೆ ತೆರಳಿ ತಪಾಸಣೆ ನಡೆಸಿದಾಗ ಯಾವುದೇ ರೋಗದ ಲಕ್ಷಣಗಳು ಕಂಡುಬಂದಿರಲಿಲ್ಲ. ಆದರೆ ಶನಿವಾರ ಅಜ್ಜೀಪುರ ಗ್ರಾಮದ ಧನಲಕ್ಷ್ಮೀ ಹಾಗೂ ಬಸಪ್ಪನದೊಡ್ಡಿ ಗುರುಸ್ವಾಮಿ ಎಂಬುವರಿಗೆ ಸೇರಿದ ಹಸು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ರೈತರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಈ ಸಂಬಂಧ ಪಶು ವೈದ್ಯಾಧಿಕಾರಿ ಡಾ.ಸಿದ್ದರಾಜು ಅವರು ವಿಜಯವಾಣಿಯೊಂದಿಗೆ ಮಾತನಾಡಿ, ವಯೋ ಸಹಜತೆಯಿಂದ ಹಸುಗಳು ಮೃತಪಟ್ಟಿವೆಯಷ್ಟೇ. ಯಾವುದೇ ರೋಗದ ಲಕ್ಷಣಗಳು

ಕಂಡುಬಂದಿಲ್ಲ. ಹಸುಗಳಿಗೆ ರೋಗಬಾಧೆ ತಗುಲದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net