ಎಲೆಕ್ಟ್ರಿಕಲ್ಸ್ ಅಂಗಡಿಯ ಬೀಗ ಮುರಿದಿದ್ದ ಇಬ್ಬರ ಬಂಧನ: ೭.೫೦ ಲಕ್ಷ ರೂ. ಮೌಲ್ಯದ ೧೩೭ ಬಂಡಲ್ ವೈರ್ ಜಪ್ತಿ

arrested
Published on

ಬೆಂಗಳೂರು: ಎಲೆಕ್ಟ್ರಿಕಲ್ಸ್ ಅಂಗಡಿಯ ಬೀಗ ಮುರಿದು ನಗದು ಹಾಗೂ ವೈರ್ ಬಂಡಲ್ಗಳನ್ನು ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗಾಯಿತ್ರಿ ನಗರದ ಬಾಲಾಜಿ(೫೧) ಮತ್ತು ಮಲ್ಲೇಶ್ವರದ ಜೀವಾನಂದ(೫೯) ಬಂಧಿತರು. ಆರೋಪಿಗಳಿಂದ ಸುಮಾರು ೭.೫೦ ಲಕ್ಷ ರೂ. ಮೌಲ್ಯದ ೧೩೭ ಬಂಡಲ್ ವೈರ್ ಮತ್ತು ಕೃತ್ಯಕ್ಕೆ ಬಳಸಿದ್ದ ಆಟೋ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳು ಸೆ.೧೧ರಂದು ರಾತ್ರಿ ಚನ್ನಸಂದ್ರ ಮುಖ್ಯರಸ್ತೆಯಲ್ಲಿನ ಬದ್ರಿ ನಾರಾಯಣ ಎಲೆಕ್ಟ್ರಿಕಲ್ಸ್ ಮತ್ತು ಲೈಟಿಂಗ್ ಹೌಸ್ ಮಳಿಗೆಯ ಬೀಗ ಮುರಿದು ಒಳ ನುಗ್ಗಿ ೮೦ ಸಾವಿರ ರೂ. ನಗದು, ವೈರ್ ಬಂಡಲ್ಗಳನ್ನು ಕಳವು ಮಾಡಿದ್ದರು. ಈ ಸಂಬಂಧ ಮಳಿಗೆಯ ಮಾಲೀಕ ಮುಕೇಶ್ ದೂರು ಕೊಟ್ಟಿದ್ದರು. ಮಳಿಗೆಯ ಕ್ಯಾಮರಾಗಳಲ್ಲಿ ಸೆರೆಯಾಗಿದ್ದ ದೃಶ್ಯಾವಳಿ ಆಧರಿಸಿ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸಲಾಯಿತು. ಬಂಧಿತರು ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ಆರೋಪಿಗಳ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಕನ್ನಕಳವು ಪ್ರಕರಣ ದಾಖಲಾಗಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net