ಕೇಂದ್ರ ಸರ್ಕಾರಕ್ಕೆ ಮಣಿದ ಟ್ವಿಟರ್ : ಸಮಸ್ಯಾತ್ಮಕವಾದ ಬಹುತೇಕ ಖಾತೆಗಳು ಬ್ಲಾಕ್

twitter
Published on

ನವದೆಹಲಿ: ಇತ್ತೀಚಿನ ಬೆಳವಣಿಗೆಯಲ್ಲಿ, ಭಾರತ ಸರ್ಕಾರ ರೈತ ಹೋರಾಟದ ಬಗ್ಗೆ ಸುಳ್ಳು ಮಾಹಿತಿ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಬಿತ್ತರಿಸುತ್ತಿವೆ ಎಂದು ಫ್ಲಾಗ್ ಮಾಡಿದ್ದ 1,178 ಟ್ವಿಟರ್ ಖಾತೆಗಳಲ್ಲಿ ಶೇ. 97 ರಷ್ಟನ್ನು ಟ್ವಿಟರ್ ಬ್ಲಾಕ್ ಮಾಡಿದೆ. ಕೇಂದ್ರದ ಐಟಿ ಸಚಿವಾಲಯವು ಈ ಬಗೆಗಿನ ಟ್ವಿಟರ್​ನ ವಿಳಂಬ ಧೋರಣೆಯನ್ನು ಖಂಡಿಸಿ, ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದ ಹಿನ್ನೆಲೆಯಲ್ಲಿ ಕಂಪೆನಿಯು ಸರ್ಕಾರದ ಆದೇಶವನ್ನು ಪಾಲಿಸಲು ಮುಂದಾಗಿದೆ ಎನ್ನಲಾಗಿದೆ.

ರೈತ ಹೋರಾಟದ ಬಗ್ಗೆ ಸುಳ್ಳು ಮಾಹಿತಿ ಮತ್ತು ಪ್ರಚೋದನಕಾರಿ ಸಂದೇಶಗಳನ್ನು ಹರಡುತ್ತಿರುವ ಪಾಕಿಸ್ತಾನಿ ಮತ್ತು ಖಾಲಿಸ್ತಾನಿ ಲಿಂಕ್ ಇರುವ 1178 ಟ್ವಿಟರ್ ಖಾತೆಗಳನ್ನು ಐಟಿ ಸಚಿವಾಲಯವು ಫ್ಲಾಗ್ ಮಾಡಿತ್ತು. ಫೆಬ್ರವರಿ 4 ರಂದು ಸದರಿ ಖಾತೆಗಳನ್ನು ಕೂಡಲೇ ಬ್ಲಾಕ್ ಮಾಡುವಂತೆ ಟ್ವಿಟರ್​ಗೆ ಸೂಚಿಸಿತ್ತು. ಆದರೆ ಫೆಬ್ರವರಿ 10 ರಂದು 500 ಖಾತೆಗಳನ್ನು ಮಾತ್ರ ಬ್ಲಾಕ್​ ಮಾಡಿ, ಉಳಿದವನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹಿನ್ನೆಲೆಯಲ್ಲಿ ಬ್ಲಾಕ್ ಮಾಡಲಾಗುವುದಿಲ್ಲ ಎಂದು ಟ್ವಿಟರ್ ಪ್ರತ್ಯುತ್ತರ ನೀಡಿತ್ತು.

ಈ ಬಗ್ಗೆ ಟ್ವಿಟರ್ ಪ್ರತಿನಿಧಿಗಳೊಂದಿಗೆ ಐಟಿ ಸೆಕ್ರೆಟರಿ ಬುಧವಾರ (ಫೆಬ್ರವರಿ 10) ಸಂಜೆ ನಡೆಸಿದ ಸಭೆಯಲ್ಲಿ ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಪ್ರಯತ್ನದಲ್ಲಿರುವ ಖಾತೆಗಳ ವಿರುದ್ಧ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕಾಗಿ ಕಟ್ಟೆಚ್ಚರ ನೀಡಿದ್ದರು. ಈ ಸಭೆಯ ನಂತರ ಟ್ವಿಟರ್​ನ ಗ್ಲೋಬಲ್ ಪಬ್ಲಿಕ್ ಪಾಲಿಸಿ ಉಪಾಧ್ಯಕ್ಷ ಮೋನಿಖ್ ಮೆಚೆ ಮತ್ತು ವಿಪಿ ಲೀಗಲ್ ಜಿಮ್ ಬೇಕರ್ ಭಾರತದ ಕಾನೂನುಗಳನ್ನು ಅನುಸರಿಸಲು ಟ್ವಿಟರ್ ಬದ್ಧವಾಗಿದೆ ಎಂದಿದ್ದರು. ಇದೀಗ ಸರ್ಕಾರ ನೀಡಿದ 1,178 ಖಾತೆಗಳ ಪಟ್ಟಿಯಲ್ಲಿ ಬಹುತೇಕ ಖಾತೆಗಳನ್ನು ಟ್ವಿಟರ್ ಬ್ಲಾಕ್ ಮಾಡಿ ದೆ.

ಈ ಬಗ್ಗೆ ಗುರುವಾರ ಸಂಸತ್ತಿನಲ್ಲಿ ಮಾತನಾಡಿದ್ದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಭಾರತದಲ್ಲಿ ವಹಿವಾಟು ನಡೆಸಬೇಕೆಂದರೆ ಭಾರತೀಯ ಕಾನೂನುಗಳಿಗೆ ಗೌರವ ನೀಡಬೇಕು. ದೇಶದಲ್ಲಿ ಅರಾಜಕತೆ ಸೃಷ್ಟಿಸಲು ನೆರವಾಗುತ್ತಾ ತಮ್ಮಿಷ್ಟದಂತೆ ವರ್ತಿಸಲು ಪ್ರಯತ್ನಿಸಿದರೆ ತಕ್ಕ ಶಿಕ್ಷೆ ಆಗುತ್ತದೆ ಎಂದು ಕಟುವಾಗಿ ನುಡಿದಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net