

ಐ ಲವ್ ಟ್ವಿಟರ್!
ಅಂದು 2017 ಡಿಸೆಂಬರ್ 21. ಸಮಯ ರಾತ್ರಿ 11.20. (ಭಾರತೀಯ ಕಾಲಮಾನ ಪ್ರಕಾರ). ಟೆಸ್ಲಾ ಕಂಪನಿಯ ಸಂಸ್ಥಾಪಕ ಎಲನ್ ಮಸ್ಕ್ ಟ್ವೀಟ್ ಮಾಡಿ, ‘ಐ ಲವ್ ಟ್ವಿಟರ್’ ಎಂದಿದ್ದರು. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಅಮೆರಿಕದ ಪತ್ರಕರ್ತ ಡೆವ್ ಸ್ಮಿತ್, ‘ಹಾಗಾದರೆ ಟ್ವಿಟರನ್ನು ಖರೀದಿಸಬಹುದಲ್ಲವೇ?’ ಎಂದು ಪ್ರಶ್ನಿಸಿದರು. ‘ಇದರ ಬೆಲೆ (ಟ್ವಿಟರ್) ಎಷ್ಟಾಗುತ್ತದೆ?’ ಎಂದು ಮರುಪ್ರಶ್ನಿಸಿದ್ದರು ಎಲನ್! ಇದಾಗಿ 52 ತಿಂಗಳು ಕಳೆದಿವೆ.
ಸಾಮಾಜಿಕ ಮಾಧ್ಯಮ ವೇದಿಕೆಗಳ ಸುಧಾರಣೆ ಕುರಿತಂತೆ ಆಗಾಗ ಟ್ವೀಟ್ ಮಾಡುತ್ತಿದ್ದ ಎಲನ್ ಮಸ್ಕ್ ಈಗ ಟ್ವಿಟರ್ ಕಂಪನಿಯನ್ನೇ 44 ಶತಕೋಟಿ ಡಾಲರ್ಗೆ ಅಂದರೆ 3.36 ಲಕ್ಷ ಕೋಟಿ ರೂಪಾಯಿಗೆ (ಪ್ರತಿ ಷೇರಿಗೆ 54.20 ಡಾಲರ್ ಅಂದರೆ 4,148 ರೂಪಾಯಿ) ಖರೀದಿಸಿದ್ದಾರೆ. ಮೊದಲು ಟ್ವಿಟರ್ ನಿರ್ದೇಶಕ ಮಂಡಳಿಯ ಭಾಗವಾಗಲು ಒಪ್ಪಿದ ಮಸ್ಕ್, ಆ ಬಳಿಕ ಅದನ್ನು ತಿರಸ್ಕರಿಸಿದರು. ಕೆಲ ದಿನಗಳಲ್ಲೇ ಹೊಸ ಪ್ರಸ್ತಾವನೆ ಇರಿಸುವ ಮೂಲಕ, ಉದ್ಯಮ ವಲಯ ಆಶ್ಚರ್ಯ ಪಡುವಂತೆ ಮಾಡಿದರು. ಟ್ವಿಟರ್ನ ಎಲ್ಲ ಷೇರುಗಳನ್ನು ಖರೀಸುವುದೇ ಆ ಹೊಸ ಪ್ರಸ್ತಾವವಾಗಿತ್ತು. ಕಂಪನಿಯ ಅಧಿಕಾರ ಹಸ್ತಾಂತರದ ಕುರಿತಂತೆ ಏಪ್ರಿಲ್ 25ರಂದು ಟ್ವಿಟರ್ ಮತ್ತು ಎಲನ್ ಮಸ್ಕ್ ನಡುವೆ ಒಪ್ಪಂದ ಏರ್ಪಟ್ಟಿದ್ದು, ವರ್ಷಾಂತ್ಯದ ಹೊತ್ತಿಗೆ ಈ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಬ್ಲೂಮ್ಗ್ ವರದಿ ಮಾಡಿದೆ. ಮಸ್ಕ್ ಟ್ವಿಟರ್ನಲ್ಲಿ ಶೇಕಡ 9.2ರಷ್ಟು ಪಾಲು ಹೊಂದಿದ್ದರು. ಮೊದಲ ಬದಲಾವಣೆಯಾಗಿ, ಟ್ವಿಟರ್ನಲ್ಲಿ ‘ಎಡಿಟ್’ ಬಟನ್ ಆಯ್ಕೆ ಸಿಗುವ ಸಾಧ್ಯತೆ ಇದೆ.
ಭಾರಿ ಮೊತ್ತದ ಪರಿಹಾರ: ಟ್ವಿಟರ್ ಮಾಲೀಕತ್ವ ಬದಲಾವಣೆಗೊಂಡ 12 ತಿಂಗಳೊಳಗೆ ಸಿಇಒ ಪರಾಗ್ ಅಗರ್ವಾಲ್ ಅವರನ್ನು ವಜಾಗೊಳಿಸಿದರೆ, ಅದಕ್ಕೆ ಪ್ರತಿಯಾಗಿ ಕಂಪನಿಯು 42 ದಶಲಕ್ಷ ಡಾಲರ್ ಅಂದರೆ 321 ಕೋಟಿ ರೂಪಾಯಿಗಳನ್ನು ನೀಡಬೇಕಾಗುತ್ತದೆ ಎಂದು ಸಂಶೋಧನಾ ಸಂಸ್ಥೆ ಈಕ್ವಿಲರ್ ತಿಳಿಸಿದೆ.
ವಾಕ್ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ತಳಹದಿ. ಟ್ವಿಟರ್ ಡಿಜಿಟಲ್ ವೇದಿಕೆಯಾಗಿದ್ದು, ಮಾನವೀಯ ಭವಿಷ್ಯಕ್ಕೆ ಅಗತ್ಯವಾದ ಪ್ರಮುಖ ಸಂಗತಿಗಳು ಇಲ್ಲಿ ಚರ್ಚೆಯಾಗಲಿವೆ. ಹೊಸ ಫೀಚರ್ಗಳನ್ನು ಸೇರ್ಪಡೆಗೊಳಿಸಿ, ಸ್ಪ್ಯಾಮ್ ವ್ಯವಸ್ಥೆ ಕೊನೆಗೊಳಿಸಲಾಗುವುದು. | ಎಲನ್ ಮಸ್ಕ್