

ಬೆಂಗಳೂರು: ರಾಜಧಾನಿಯ ಸಂಚಾರದಟ್ಟಣೆ ನಿಯಂತ್ರಣ ಉದ್ದೇಶದಿಂದ ಉಪನಗರ ರೈಲು ಯೋಜನೆಗೆ ರೈಲ್ವೆ ಮಂಡಳಿ (ವಿಸõತ) ಅನುಮೋದನೆ ನೀಡಿ ಎರಡು ತಿಂಗಳಾದರೂ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿಲ್ಲ. ಹೀಗಾಗಿ ಯೋಜನೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಸಾರ್ವಜನಿಕರು ಗುರುವಾರ ‘ಚುಕುಬುಕು ಬೇಕು’ ಹ್ಯಾಷ್ಟ್ಯಾಗ್ ಅಡಿ ಟ್ವಿಟರ್ ಅಭಿಯಾನ ನಡೆಸಿದ್ದಾರೆ.
ನೀತಿ ಆಯೋಗ, ರೈಲ್ವೆ ಸಚಿವಾಲಯ, ಹಣಕಾಸು ಸಚಿವಾಲಯ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಧಿಕಾರಿಗಳನ್ನೊಳಗೊಂಡ ರೈಲ್ವೆ ಮಂಡಳಿ (ವಿಸõತ) 2019ರ ನ. 4ರಂದು ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡಿತ್ತು. ಅದಾದ ಕೆಲವೇ ದಿನಗಳಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ಯೋಜನೆಗೆ ಅನುಮತಿ ನೀಡಲಾಗುತ್ತದೆ
ಎಂಬ ನಿರೀಕ್ಷೆಯನ್ನು ಹೊಂದಲಾಗಿತ್ತು. ಆದರೆ, ರೈಲ್ವೆ ಮಂಡಳಿ ಅನುಮತಿ ನೀಡಿದ ನಂತರ 2-3 ಬಾರಿ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಆದರೂ ಉಪನಗರ ರೈಲು ಯೋಜನೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಇದೀಗ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದಲ್ಲಿರುವ ಕಾರಣ, ‘ಚುಕುಬುಕು ಬೇಕು’, ‘ಮೊದಲು ಟ್ರೖೆನ್ ಬೇಕು’ ಎಂಬ ಅಡಿಬರಹದಲ್ಲಿ ಟ್ವಿಟರ್ ಅಭಿಯಾನ ನಡೆಸಲಾಗಿದೆ. ಅದರಂತೆ ಗುರುವಾರ ಮಧ್ಯಾಹ್ನ 2ರಿಂದ ಅಭಿಯಾನ ನಡೆಸಲಾಗಿದ್ದು, ಸಾವಿರಕ್ಕೂ ಹೆಚ್ಚಿನ ಜನರು ಟ್ವೀಟ್ ಮಾಡಿದ್ದಾರೆ.
ಯೋಜನೆ ವಿವರ: ಉಪನಗರ ರೈಲು ಯೋಜನೆಯಿಂದ ನಗರದೊಳಗೆ 148.17 ಕಿ.ಮೀ. ಉದ್ದದ ರೈಲು ಸಂಪರ್ಕ ಏರ್ಪಡಲಿದೆ. ಅದರಲ್ಲಿ 55.57 ಕಿ.ಮೀ. ಎತ್ತರಿಸಿದ (ಎಲಿವೇಟೆಡ್) ಮಾರ್ಗವಾಗಿದ್ದರೆ, 92.6 ಕಿ.ಮೀ. ಉದ್ದ ನೆಲಮಟ್ಟದ ಮಾರ್ಗವಾಗಿರಲಿದೆ. ಯೋಜನೆಗಾಗಿ 16 ಸಾವಿರ ಕೋಟಿ ರೂ. ವ್ಯಯಿಸಲಾಗುತ್ತದೆ. ಪ್ರಮುಖವಾಗಿ ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು, ಕೋಲಾರ ಜಿಲ್ಲೆಗಳನ್ನು ರೈಲ್ವೆ ಮಾರ್ಗ ಸಂರ್ಪಸಲಿದೆ. ಜತೆಗೆ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸೂರು, ಬಂಗಾರಪೇಟೆಗಳಿಗೆ ರೈಲು ಸೇವೆ ಅಭಿವೃದ್ಧಿಗೊಳ್ಳಲಿದೆ.