

ನವದೆಹಲಿ: ಇದುವರೆಗೂ ಆಯ್ದ ದೇಶಗಳಲ್ಲಿ ಜಾರಿಗೆ ತಂದಿದ್ದ ಟ್ವಿಟರ್ ಬ್ಲೂ ಟಿಕ್ ಪಡೆಯುವ ವೆರಿಫಿಕೇಶನ್ ಸೇವೆಯನ್ನು ಭಾರತದಲ್ಲೂ ಇಂದಿನಿಂದ ಅಧಿಕೃತವಾಗಿ ಆರಂಭಿಸಲಾಗಿದೆ. ನಿಗದಿತ ಮೊತ್ತವನ್ನು ಪಾವತಿಸಿ ಟ್ವಿಟರ್ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ.
ಭಾರತದಲ್ಲಿ ಬ್ಲೂ ಟಿಕ್ ಪಡೆಯಲು ಮೊಬೈಲ್ ಬಳಕೆದಾರರಾದರೆ ತಿಂಗಳಿಗೆ 900 ರೂ. ಮತ್ತು ವೆಬ್ಸೈಟ್ ಆದರೆ 650 ರೂ. ಪಾವತಿಸಬೇಕಾಗುತ್ತದೆ. ವಾರ್ಷಿಕ ಟ್ವಿಟರ್ ಸದಸ್ಯತ್ವ ಪ್ಲಾನ್ ಸಹ ಪಡೆಯಬಹುದಾಗಿದೆ. ಇದರ ಮೊತ್ತ 6800 ರೂಪಾಯಿ. ತಿಂಗಳಿಗೆ 566.67 ರೂ. ತಗುಲುತ್ತದೆ. ಪ್ರತಿ ತಿಂಗಳ ಬದಲು ವಾರ್ಷಿಕ ಪ್ಲಾನ್ ಆಯ್ಕೆ ಮಾಡಿಕೊಂಡರೆ ಹಣದ ಮೊತ್ತ ಕಡಿಮೆಯಾಗಲಿದೆ.
ಈವರೆಗೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಜಪಾನ್, ಯುನೈಟೆಡ್ ಕಿಂಗ್ಡಮ್, ಸೌದಿ ಅರೇಬಿಯಾ, ಫ್ರಾನ್ಸ್, ಜರ್ಮನಿ, ಇಟಲಿ, ಪೋರ್ಚುಗಲ್, ಸ್ಪೇನ್, ಇಂಡೋನೇಷ್ಯಾ ಮತ್ತು ಬ್ರೆಜಿಲ್ ಮಾತ್ರ ಬ್ಲೂಟಿಕ್ ಪಡೆಯುವ ಸೌಲಭ್ಯವಿತ್ತು.
ಅಂದಹಾಗೆ ಬ್ಲೂ ಟಿಕ್ ಪಡೆದ ಖಾತೆಗಳಿಗಾಗಿ ಟ್ವಿಟರ್ನಿಂದ ಕೆಲವು ಹೊಸ ಫೀಚರ್ಗಳು ಸಿಗಲಿವೆ. ಇದುವರೆಗೂ ಟ್ವಿಟರ್ನಲ್ಲಿ ಸಣ್ಣ ವಿಡಿಯೋ ತುಣುಕನ್ನು ಮಾತ್ರ ಪೋಸ್ಟ್ ಮಾಡಲು ಅವಕಾಶವಿತ್ತು. ಆದರೆ, ಬ್ಲೂಟಿಕ್ ಸೇವೆ ಪಡೆದವರು ಟ್ವಿಟರ್ಗೆ ಉದ್ದದ ವೀಡಿಯೊಗಳನ್ನು ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ ಮತ್ತು ಬಾಟ್‌ಗಳ ವಿರುದ್ಧದ ಟ್ವಿಟರ್ ಯುದ್ಧದಲ್ಲಿ ನೀವು ಟ್ವಿಟರ್ ಅನ್ನು ಬೆಂಬಲಿಸುತ್ತಿರುವುದರಿಂದ, ಅರ್ಧದಷ್ಟು ಜಾಹೀರಾತುಗಳನ್ನು ಟ್ವಿಟರ್ ಬಹುಮಾನವಾಗಿ ನೀಡಲಿದೆ ಎಂದು ಕಂಪನಿ ಈ ಹಿಂದೆಯೇ ತಿಳಿಸಿದೆ. (ಏಜೆನ್ಸೀಸ್)