

ನವದೆಹಲಿ : ಹೊಸ ಐಟಿ ನಿಯಮಗಳ ಪಾಲನೆ ಮಾಡದೆ ಕೇಂದ್ರ ಸರ್ಕಾರದ ಕೋಪಕ್ಕೆ ತುತ್ತಾಗಿರುವ ಟ್ವಿಟರ್, ಇದೀಗ ಭಾರತದಲ್ಲಿ ರೆಸಿಡೆಂಟ್ ಗ್ರೀವೆನ್ಸ್ ಆಫೀಸರ್ಅನ್ನು ನೇಮಕ ಮಾಡಿದೆ. ನಿಯಮಗಳು ಹೇಳುವಂತೆ ಭಾರತೀಯ ನಿವಾಸಿಯಾದ ವಿನಯ್ ಪ್ರಕಾಶ್ ಎಂಬುವರನ್ನು ಈ ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಟ್ವಿಟರ್ ಇಂಡಿಯ ತಿಳಿಸಿದೆ.
ಜೊತೆಗೆ, ಹೊಸ ನಿಯಮಗಳ ಮತ್ತೊಂದು ನಿರ್ದೇಶನದಂತೆ, ಮೇ 26, 2021 ರಿಂದ ಜೂನ್ 25, 2021 ರವರೆಗೆ ಭಾರತೀಯ ಬಳಕೆದಾರರ ದೂರುಗಳನ್ನು ನಿರ್ವಹಿಸಿದ ಬಗ್ಗೆ ಒಂದು 'ಪಾರದರ್ಶಕತೆ ವರದಿ'ಯನ್ನೂ ಟ್ವಿಟರ್ ಪ್ರಕಟಿಸಿದೆ ಎನ್ನಲಾಗಿದೆ.
ಅಮೆರಿಕದ ಕಂಪೆನಿಯಾದ ಟ್ವಿಟರ್, ಭಾರತ ಸರ್ಕಾರದ ಹೊಸ ಐಟಿ ನಿಯಮಗಳ ಅನುಸಾರವಾಗಿ ಮೂರು ಮುಖ್ಯ ಅಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ವಿಳಂಬ ಪ್ರವೃತ್ತಿ ಅನುಸರಿಸುತ್ತಿತ್ತು. ಈ ಬಗ್ಗೆ ಗುರುವಾರದಂದು ದೆಹಲಿ ಹೈಕೋರ್ಟ್ ನಿಯಮಗಳನ್ನು ಪಾಲಿಸದಿರುವ ಬಗ್ಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬಹುದು ಎಂದು ಹೇಳಿತ್ತು ಎನ್ನಲಾಗಿದೆ. (ಏಜೆನ್ಸೀಸ್)