ಕೈಗಾರಿಕಾ ಕ್ಷೇತ್ರಕ್ಕೆ ಟಿವಿಎನ್ ಕೊಡುಗೆ ಅಪಾರ

Shimoga District Industrial Association
ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದಲ್ಲಿ ಟಿ.ವಿ.ನಾರಾಯಣಶಾಸ್ತ್ರಿ ಅವರ ನಾ ಕಂಡಂತೆ ನನ್ನ ಗುರು ಟಿವಿಎನ್ ಪುಸ್ತಕ ಬಿಡುಗಡೆಗೊಳಿಸಲಾಯಿತು. ಸಿ.ನಂಜುಂಡಶೆಟ್ಟಿ, ಎಸ್.ರುದ್ರೇಗೌಡ, ಕೆ.ಎಸ್.ಅನಂತರಾಮ್, ಜೋಯಿಸ್ ರಾಮಾಚಾರ್, ಎನ್.ಗೋಪಿನಾಥ್, ಹರ್ಷ ಕಾಮತ್, ವಿಶ್ವೇಶ್ವರಯ್ಯ, ಆರ್.ಗಣೇಶ್, ಎಚ್.ಬಿ.ರಮೇಶ್ ಬಾಬು ಇದ್ದರು.
Published on

ಶಿವಮೊಗ್ಗ: ಕೈಗಾರಿಕೆಗಳು ದೇಶದ ಸಂಪತ್ತೆಂಬ ಸರ್ ಎಂ.ವಿಶ್ವೇಶ್ವರಯ್ಯ ಅವರ ಕಲ್ಪನೆಯನ್ನು ಶಿವಮೊಗ್ಗದಲ್ಲಿ ಕಾರ್ಯರೂಪಕ್ಕೆ ತಂದವರು ಟಿ.ವಿ.ನಾರಾಯಣ ಶಾಸ್ತ್ರಿ ಎಂದು ಸಾಗರ ರಸ್ತೆಯ ಎಸ್‌ಜಿಕೆ ಇಂಡಸ್ಟ್ರೀಸ್ ಸಂಸ್ಥಾಪಕ ಸಿ.ನಂಜುಂಡಶೆಟ್ಟಿ ಹೇಳಿದರು.

ಶಿವಮೊಗ್ಗ ಜಿಲ್ಲಾ ಕೈಗಾರಿಕಾ ಸಂಘದ ಕಚೇರಿ ಆವರಣದಲ್ಲಿ ಶನಿವಾರ ಸಂಘದ ಸಂಸ್ಥಾಪಕ ಟಿ.ವಿ.ನಾರಾಯಣಶಾಸ್ತ್ರಿ ಅವರ 99ನೇ ಜನ್ಮದಿನಾಚರಣೆ ಮತ್ತು ನಾ ಕಂಡಂತೆ ನನ್ನ ಗುರು ಟಿವಿಎನ್ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕೈಗಾರಿಕಾ ಕ್ಷೇತ್ರದಲ್ಲಿ ಟಿವಿಎನ್ ಅವರು ಸಾಕಷ್ಟು ಉತ್ಕೃಷ್ಟತೆ, ಪರಿಣಿತಿ ಪಡೆದಿದ್ದರು. ಫೌಂಡ್ರಿ ಕೈಗಾರಿಕೆಗಳು, ಆಟೋ ಮೊಬೈಲ್ ಕ್ಷೇತ್ರದಲ್ಲಿ ಅವರು ಅಪಾರ ಜ್ಞಾನವನ್ನು ಹೊಂದಿದ್ದರು. ಕೈಗಾರಿಕೆಗಳ ಅಭಿವೃದ್ಧಿ, ಉದ್ದಿಮೆದಾರರು ಮತ್ತು ಕಾರ್ಮಿಕರ ಭವಿಷ್ಯಕ್ಕಾಗಿ ಸೇವೆ ಸಲ್ಲಿಸಿದ್ದರು ಎಂದರು.
ನಾ ಕಂಡಂತೆ ನನ್ನ ಗುರು ಟಿವಿಎನ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಎಂಎಲ್‌ಸಿ ಎಸ್.ರುದ್ರೇಗೌಡ, ಟಿವಿಎನ್ ಅವರ 99ನೇ ಜನ್ಮದಿನದಂದು ಜಿಲ್ಲಾ ಕೈಗಾರಿಕಾ ಸಂಘಕ್ಕೆ ಹೊಸ ಚೈತನ್ಯ ಬಂದಿದೆ. ಟಿವಿಎನ್ ನನಗೂ ಗುರು ಆಗಿದ್ದರು. ಹೃದಯಸ್ಪರ್ಶಿ ಸಂದರ್ಭಗಳು ಎದುರಾಗಿವೆ. ಸಣ್ಣ ವಿಚಾರವಾದರೂ ಸೂಕ್ಷ್ಮವಾಗಿ ಆಲೋಚನೆ ಮಾಡುತ್ತಿದ್ದರು. ಕ್ರಿಯಾಶೀಲತೆ ಅವರಲ್ಲಿತ್ತು. ಆಧ್ಯಾತ್ಮದ ಬಗ್ಗೆಯೂ ಒಲವಿತ್ತು. ಕೈಗಾರಿಕಾ ಮಾತ್ರವಲ್ಲದೆ, ಆಧ್ಯಾತ್ಮವಾಗಿಯೂ ಮನುಷ್ಯ ಏನು ಮಾಡಬೇಕು ಎಂಬುದನ್ನು ತೋರಿಸಿಕೊಟ್ಟಿದ್ದರು ಎಂದರು.
ಶಿವಮೊಗ್ಗದಲ್ಲಿ ಕೈಗಾರಿಕಾ ಕ್ರಾಂತಿ ಹುಟ್ಟು ಹಾಕಿದವರಲ್ಲಿ ಟಿವಿಎನ್ ಕೂಡ ಒಬ್ಬರು. ಮಾತೃ ಹೃದಯಿ ಆಗಿದ್ದರು. ಆಟೋ ಮೊಬೈಲ್ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದರು. ಎಲ್ಲರನ್ನೂ ಬೆಳೆಸುವ ಗುಣ ಅವರಲ್ಲಿತ್ತು ಎಂದು ಹೇಳಿದರು.
ಸಂಘದ ಅಧ್ಯಕ್ಷ ಜೋಯಿಸ್ ರಾಮಾಚಾರ್ ಮಾತನಾಡಿ, ನಾ ಕಂಡಂತೆ ನನ್ನ ಗುರು ಟಿವಿಎನ್ ಪುಸ್ತಕ ಹೊರಬರಲು ಎಸ್.ರುದ್ರೇಗೌಡ ಪ್ರೇರಣೆಯಾಗಿದ್ದಾರೆ. ಟಿವಿಎನ್ ಅವರ ಜತೆ ನನ್ನ ಒಡನಾಟ ಹೆಚ್ಚಿತ್ತು. ಹತ್ತಿರದಿಂದ ಅವರನ್ನು ನೋಡುವ ಅವಕಾಶ ಸಿಕ್ಕಿತ್ತು. ಅದು ನನ್ನ ಪೂರ್ವಜನ್ಮದ ಪುಣ್ಯ ಎಂದರು.
ಪ್ರಾಸ್ತಾವಿಕ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕೆ.ಎಸ್.ಅನಂತರಾಮ್, ಯಾವುದೇ ದೇಶದ ಪ್ರಗತಿ ಆಗಬೇಕಾದರೆ ರೈತ ಮತ್ತು ಕೈಗಾರಿಕೆಗಳು ಮುಖ್ಯ. ಈ ಎರಡರ ಸಮ್ಮಿಲನದಿಂದ ದೇಶದ ಅಭಿವೃದ್ಧಿ ಆಗಲಿದೆ. ಇವೆರಡು ಒಂದೇ ನಾಣ್ಯದ ಎರಡು ಮುಖಗಳು ಎಂದರು.
ರೈತನದ್ದು ಮುಗ್ಧ ಜೀವನ ಇರಲಿದೆ. ವಿದ್ಯಾರ್ಹತೆ ಬೇಕಿಲ್ಲ. ಆದರೆ ಕೈಗಾರಿಕೋದ್ಯಮಿ ಉನ್ನತ ಶಿಕ್ಷಣ ಪಡೆದಿರುತ್ತಾನೆ. ದೇಶಕ್ಕೆ ತೆರಿಗೆ ಕಟ್ಟುತ್ತಾನೆ. ಹಾಗಾಗಿ ದೇಶದ ಸಮಗ್ರ ಏಳಿಗೆಯಲ್ಲಿ ಉದ್ಯಮಿಗಳ ಪಾತ್ರ ದೊಡ್ಡದಿದೆ. ಉದ್ಯಮಿಗಳು ತಂತ್ರಜ್ಞಾನ ಬಳಸಿಕೊಂಡು ವೈಜ್ಞಾನಿಕವಾಗಿ ಬೆಳೆದಿದ್ದು ಯೋಗ್ಯ, ಉತ್ತಮ ಕ್ಷೇತ್ರವಾಗಿ ರೂಪುಗೊಳ್ಳುವಂತೆ ಮಾಡಿದ್ದೇ ಆದಲ್ಲಿ 21ನೇ ಶತಮಾನದಲ್ಲಿ ದೇಶಕ್ಕೆ ಕಾಣಿಕೆ ನೀಡಿದಂತೆ ಆಗುತ್ತದೆ. ಟಿ.ವಿ.ನಾರಾಯಣ ಶಾಸ್ತ್ರಿ ಶ್ರಮಕ್ಕೆ ಆದ್ಯತೆ ನೀಡುತ್ತಿದ್ದರು ಎಂದು ಸ್ಮರಿಸಿದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್, ಕೈಗಾರಿಕಾ ಸಂಘದ ಜಿಲ್ಲಾ ಉಪಾಧ್ಯಕ್ಷ ಹರ್ಷ ಕಾಮತ್, ಕಾರ್ಯದರ್ಶಿ ವಿಶ್ವೇಶ್ವರಯ್ಯ, ಜಂಟಿ ನಿರ್ದೇಶಕ ಆರ್.ಗಣೇಶ್, ಖಜಾಂಚಿ ಎಚ್.ಬಿ.ರಮೇಶ್ ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net