

ನವದೆಹಲಿ: ಕಳ್ಳ ಸಾಮಾನ್ಯವಾಗಿ ತನ್ನ ಕೃತ್ಯದ ಬಗ್ಗೆ ಮಾಧ್ಯಮದಲ್ಲಿ ಸುದ್ದಿ ಪ್ರಸಾರವಾಯಿತೆಂದರೆ ಮುಜುಗರಕ್ಕೆ ಒಳಗಾಗುತ್ತಾನೆ. ಅಂಥದ್ದರಲ್ಲಿ ಇಲ್ಲೊಬ್ಬ ಕಳ್ಳ ಟಿವಿ ಚಾನೆಲೊಂದರ ಲೈವ್ ಪ್ರಸಾರ ನಡೆಯುತ್ತಿದ್ದಾಗಲೇ ಯಾವುದೇ ಮುಜುಗರವಿಲ್ಲದೆ ಧಾವಿಸಿ, ಪಿಸ್ತೂಲ್ ಹಿಡಿದುಕೊಂಡು ಬೆದರಿಸಿ, ರಿಪೋರ್ಟರ್ ಹಾಗೂ ಕ್ಯಾಮರಾಮ್ಯಾನ್ನಿಂದ ಹಣ ದೋಚಿಕೊಂಡು ಪರಾರಿಯಾಗಿದ್ದಾನೆ.
ಫೆ. 12ರಂದು ಈ ಘಟನೆ ಸಂಭವಿಸಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ಈಕ್ವಡಾರ್ನ ಇಸಿಡ್ರೊ ರೊಮೆರೊ ಕಾರ್ಬೊ ಮಾನುಮೆಂಟಲ್ ಸ್ಟೇಡಿಯಮ್ನಲ್ಲಿ ಅಲ್ಲಿನ ಸ್ಪೋರ್ಟ್ ಚಾನೆಲೊಂದರ ಪತ್ರಕರ್ತ ಡೀಗೊ ಒರ್ಡಿನೊಲಾ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಏಕಾಂಗಿ ಆಗಂತುಕ ಮುಖಕ್ಕೆ ಮಾಸ್ಕ್ ಹಾಗೂ ಕ್ಯಾಪ್ ಧರಿಸಿಕೊಂಡು ಬಂದಿದ್ದರಿಂದ ಗುರುತು ಮರೆಮಾಚಿದ್ದು, ಹಣ ದೋಚಿಕೊಂಡು ಹೋದ ಆತನನ್ನು ಕೊನೆಗೆ ರಿಪೋರ್ಟರ್ ಹಾಗೂ ಕ್ಯಾಮರಾಮ್ಯಾನ್ ಹಿಂಬಾಲಿಸಿಕೊಂಡು ಹೋದರೂ ಆತ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಈ ಕುರಿತ ವಿಡಿಯೋ ಹಂಚಿಕೊಂಡಿರುವ ಒರ್ಡಿನೊಲಾ, ನಾವು ನೆಮ್ಮದಿಯಾಗಿ ಕೆಲಸ ಮಾಡುವಂತೆಯೂ ಇಲ್ಲ, ಮಧ್ಯಾಹ್ನ 1 ಗಂಟೆಯಲ್ಲೇ ಹೀಗೆಲ್ಲ ನಡೆದಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಹಲವರು ಮಾಧ್ಯಮ ಪ್ರತಿನಿಧಿಗಳ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಅವರಿಗೆ ಬೆಂಬಲ ಸೂಚಿಸಿ ಕಮೆಂಟ್ ಮಾಡಿದ್ದಾರೆ. ಆರೋಪಿಯನ್ನು ಶೀಘ್ರ ಪತ್ತೆ ಹಚ್ಚುವುದಾಗಿ ಭರವಸೆ ನೀಡಿದ್ದಾರೆಂದು ರಿಪೋರ್ಟರ್ ತಿಳಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ